Quantcast
Viewing all articles
Browse latest Browse all 1745

ಸ್ವಾಭಿಮಾನಿ, ಸಂಘಟಿತ ಸಮಾಜಕ್ಕಾಗಿ ಆರೆಸ್ಸೆಸ್

ಸ್ವಾಭಿಮಾನಿ, ಸಂಘಟಿತ ಸಮಾಜಕ್ಕಾಗಿ ಆರೆಸ್ಸೆಸ್

ಲೇಖಕರು: ಎಸ್. ಎಸ್. ನರೇಂದ್ರ ಕುಮಾರ್
(ಅಕ್ಟೊಬರ್ ೨೫ರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

Image may be NSFW.
Clik here to view.

ನವರಾತ್ರಿ ಮಹೋತ್ಸವ ಹಿಂದುಗಳಿಗೆ ಬಹಳ ಪ್ರಮುಖ ಹಬ್ಬ. ಸಂಭ್ರಮದ ಉತ್ಸವ. ಒಂಬತ್ತು ದಿನಗಳ ಕಾಲ ದುರ್ಗೆಯ ವಿವಿಧ ರೂಪಗಳನ್ನು ಪೂಜಿಸಿ, ಹತ್ತನೆಯ ದಿನವಾದ ವಿಜಯದಶಮಿಯಂದು ವಿಜಯವನ್ನು ಆರಾಧಿಸುವ ಹಬ್ಬವದು. ದಶಪ್ರಹರಣಧಾರಿಣಿಯಾದ ದುರ್ಗೆಯು ನಾನಾ ಆಯುಧಗಳನ್ನು ಹಿಡಿದು ಶತ್ರುಗಳನ್ನು ಸಂಹರಿಸಿ ಧರ್ಮದ ಸಂಸ್ಥಾಪನೆ ಮಾಡುತ್ತಾಳೆ. ಅಧರ್ಮದ ವಿರುದ್ಧ ಧರ್ಮದ ವಿಜಯ ಎನ್ನುವ ಸಂದೇಶವನ್ನು ನವರಾತ್ರಿ ಮತ್ತು ವಿಜಯದಶಮಿಗಳು ನೀಡುತ್ತವೆ.

ವಿಜಯದ ಸಂಕೇತವಾದ ವಿಜಯದಶಮಿ ಪರ್ವ ದಿನದಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭವಾಯಿತು. 1925 ರಲ್ಲಿ ಪ್ರಾರಂಭವಾದ ಸಂಘಕ್ಕೆ ಇನ್ನೈದು ವರ್ಷ ಕಳೆದರೆ, ನೂರು ತುಂಬುತ್ತದೆ. ಒಂದು ಸಾವಿರ ವರ್ಷಗಳ ಆಕ್ರಮಕರ ಆಳ್ವಿಕೆ, ಅವರ ವಿರುದ್ಧದ ಸತತ ಸಂಘರ್ಷದ ಸಮಯದಲ್ಲಿ ಕಾರಣಾಂತರಗಳಿಂದ ಹಿಂದು ಸಮಾಜ ತನ್ನ ಅಸ್ಮಿತೆಯನ್ನೇ ಮರೆತಿದ್ದ ಕಾಲವದು. ಹಿಂದುಗಳು ಒಟ್ಟಾಗಲಾರರು, ಕೇವಲ ಅವರನ್ನು ನಂಬಿಕೊಂಡು ಸ್ವಾತಂತ್ರ್ಯ ಗಳಿಸುವುದು ಅಸಾಧ್ಯ ಎಂಬ ನಿಶ್ಕರ್ಷೆಗೆ ಬಂದಿದ್ದರು ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದ ನಾಯಕರು. ಅಂತೆಯೇ, “ಹೇಡಿಗಳಂತಿದ್ದ ಹಿಂದುಗಳೊಡನೆ ಗೂಂಡಾಗಳಂತಿದ್ದ ಮುಸಲ್ಮಾನರನ್ನು ಸೇರಿಸಿದರೆ ಸ್ವಾತಂತ್ರ್ಯ ಗಳಿಸಬಹುದು” ಎಂಬ ನಂಬಿಕೆಯಿಂದ ಮುಸಲ್ಮಾನರ ಓಲೈಕೆಗೂ ಕೈಹಾಕಿದರು. ಮುಸಲ್ಮಾನರ ಬೇಡಿಕೆಗಳನ್ನೆಲ್ಲಾ ಪೂರೈಸುತ್ತಾ ಹೋದರು. ಕಡೆಗೊಂದು ದಿನ ಮುಸಲ್ಮಾನರಿಗೊಂದು ದೇಶವನ್ನು ನೀಡುವುದಕ್ಕಾಗಿ ಮಾತೃಭೂಮಿಯನ್ನೇ ತುಂಡರಿಸಿದರು.

ಈ ರೀತಿ, ಹಿಂದುಸಮಾಜದ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದ ರಾಜಕೀಯ ನಾಯಕರಿದ್ದ ಕಾಲದಲ್ಲಿ, ಹಿಂದುವೆಂದು ಕರೆಸಿಕೊಳ್ಳುವುದು ಅಪಮಾನ ಎಂದು ಬುದ್ಧಿವಂತರು ತಿಳಿಯುತ್ತಿದ್ದ ಕಾಲದಲ್ಲಿ, ಹಿಂದು ಸಮಾಜವನ್ನು ಸಂಘಟಿಸುವ ಸಾಹಸಕ್ಕೆ ಕೈಹಾಕಿದವರು ಡಾಕ್ಟರ್ ಕೇಶವ ಬಲಿರಾಂ ಹೆಡಗೇವಾರ್. ಹೆಸರು, ಕಛೇರಿ, ಜಾಹೀರಾತು, ಸದಸ್ಯರು, ನೋಂದಣಿ, ಇತ್ಯಾದಿಗಳಾವುದೂ ಇಲ್ಲದೆ, ಕೇವಲ ನಾಲ್ಕಾರು ಬಾಲಕರನ್ನು ಕಟ್ಟಿಕೊಂಡು “ಹಿಂದುರಾಷ್ಟ್ರದ ಪರಮವೈಭವದ ಗುರಿ”ಯನ್ನು ಹೊತ್ತುಕೊಂಡು ಅವರು ಪ್ರಾರಂಭಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಅಂದು ಹೆಚ್ಚಿನವರ ಅಪಹಾಸ್ಯಕ್ಕೆ ಗುರಿಯಾಯಿತು. ಹಿಂದುರಾಷ್ಟ್ರದ ಸಂಘಟನೆ ಮಾಡುವೆ ಎಂದು ಹೇಳಿಕೊಂಡು ಮೈದಾನದಲ್ಲಿ ಬಾಲಕರೊಡನೆ ಆಟವಾಡುತ್ತಿದ್ದ ಹೆಡಗೇವಾರರನ್ನು “ಗವಾರೋಂ ಕಾ ಹೆಡ್” (ಹುಚ್ಚರ ಮುಖ್ಯಸ್ಥ) ಎಂದು ಪರಿಹಾಸ್ಯ ಮಾಡಿದರು ಜನ. ಕಣ್ಮುಂದೆ ಅತ್ಯುನ್ನತ ಗುರಿಯನ್ನು ಹೊತ್ತು ಕಾರ್ಯ ಪ್ರಾರಂಭಿಸಿದ್ದ ಡಾಕ್ಟರ್ ಹೆಡಗೇವಾರರಿಗೆ ತಾವು ಹೊರಟಿದ್ದ ದಾರಿಯು ಸ್ಪಷ್ಟವಾಗಿ ತಿಳಿದಿತ್ತು. ಸಂಘವು ದೇಶದ ಎಲ್ಲ ಗ್ರಾಮಗಳಿಗೂ ತಲುಪಿ, ಎಲ್ಲ ಹಿಂದುಗಳನ್ನೂ ಸಂಘಟಿಸಲಿದೆ ಎಂಬ ಭವಿಷ್ಯದ ದೃಶ್ಯವನ್ನು ಅಂದೇ ಕಂಡಿದ್ದ ಹೆಡಗೇವಾರರು, ದೇಶದ ಎಲ್ಲರನ್ನೂ ಜೋಡಿಸುವ ಶಕ್ತಿಯಿರುವ, ವರ್ತಮಾನ ಭಾರತವನ್ನು ಪುರಾತನ ಸಂಸ್ಕೃತಿ-ಪರಂಪರೆಗಳೊಡನೆ ಬೆಸೆಯುವ ಸಾಮಥ್ರ್ಯವಿರುವ ಸಂಸ್ಕೃತ ಭಾಷೆಯಲ್ಲಿ ಸಂಘದ ಪ್ರಾರ್ಥನೆಯನ್ನು ರಚಿಸಿದರು. ಈ ರೀತಿ ಅವರು ಇಟ್ಟ ಪ್ರತಿಯೊಂದು ಹೆಜ್ಜೆಯೂ ದೃಢವಾಗಿತ್ತು, ಸಂಘಕಾರ್ಯವು ಶತಮಾನಗಳ ಕಾಲ ನಡೆಯುವಂತೆ ನೋಡಿಕೊಳ್ಳುವ ನಿಟ್ಟಿನಲ್ಲೇ ಇತ್ತು.

Image may be NSFW.
Clik here to view.
Dr Keshav Baliram Hedgewar, RSS Founder

1925 ರಲ್ಲಿ ಬೀಜರೂಪದಲ್ಲಿ ಪ್ರಾರಂಭವಾದ ಸಂಘಕಾರ್ಯ ಇಂದು ವಿಶಾಲವೃಕ್ಷವಾಗಿದೆ. ದೇಶಾದ್ಯಂತ ಮಾತ್ರವಲ್ಲ ವಿಶ್ವಾದ್ಯಂತ ಪಸರಿಸಿದೆ. ಅದು ದೇಶದ ಎಲ್ಲ ಪ್ರದೇಶಗಳನ್ನೂ ಮುಟ್ಟಿರುವುದು ಮಾತ್ರವಲ್ಲ, ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯ ಮಾಡುತ್ತಿದೆ. ಮತ್ತು ತಾನು ಕೆಲಸ ಮಾಡುತ್ತಿರುವ ಪ್ರತಿಯೊಂದು ಕ್ಷೇತ್ರದಲ್ಲೂ ಅದೇ ಅದ್ವಿತೀಯ ಸಂಘಟನೆಯೂ ಆಗಿದೆ. ಇಂದು ಸಂಘ ಸ್ಪರ್ಶಿಸದ ಕ್ಷೇತ್ರವೇ ಇಲ್ಲವೆಂದು ಹೇಳಿದರೆ ಉತ್ಪ್ರೇಕ್ಷೆ ಎನಿಸದು. ಇಂದು 39,000 ಕ್ಕೂ ಹೆಚ್ಚಿನ ಸ್ಥಳಗಳಲ್ಲಿ 63,500 ಆರೆಸ್ಸೆಸ್ಸಿನ ಶಾಖೆಗಳು ನಿತ್ಯವೂ ನಡೆಯುತ್ತಿವೆ. 25,000 ಸ್ಥಳಗಳಲ್ಲಿ ವಾರಕ್ಕೊಮ್ಮೆ ಸೇರುವ ಮಿಲನ್ಗಳು ಮತ್ತು 28,500 ಸ್ಥಳಗಳಲ್ಲಿ ತಿಂಗಳಿಗೊಮ್ಮೆ ಸೇರುವ ಸಂಘಮಂಡಲಿಗಳು ನಡೆಯುತ್ತಿವೆ. ಇಲ್ಲಿ ಸಕ್ರಿಯವಾಗಿ ಭಾಗವಹಿಸುವವರ ಸಂಖ್ಯೆ ಹಲವು ಲಕ್ಷಗಳು. ಇದಕ್ಕಿಂತ ಹಲವು ಪಟ್ಟು ಹೆಚ್ಚಿನ ಸಂಖ್ಯೆಯ ಸ್ವಯಂಸೇವಕರು ಉತ್ಸವಗಳಲ್ಲಿ ಮತ್ತು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಪ್ರತಿವರ್ಷವೂ ಆರೆಸ್ಸೆಸ್ ನಡೆಸುವ ಪ್ರಶಿಕ್ಷಣ ಶಿಬಿರಗಳಲ್ಲಿ ಹತ್ತಾರು ಸಹಸ್ರ ಯುವಕರು ತರಬೇತಿ ಪಡೆದು ಕಾರ್ಯಕರ್ತರಾಗುತ್ತಿದ್ದಾರೆ. ಆರೆಸ್ಸೆಸ್ ವಿವಿಧ ಪ್ರಾಂತಗಳಲ್ಲಿ ನಡೆಸಿರುವ ಸಮಾವೇಶಗಳಲ್ಲಿ ಲಕ್ಷಾಂತರ ಜನ ಸ್ಥಳೀಯರು ಭಾಗವಹಿಸಿದ್ದಾರೆ. ಇವರಾರೂ ಹಣವನ್ನೋ ಅಥವಾ ಮತ್ಯಾವುದೋ ಆಮಿಷವನ್ನು ನೀಡಿ ಕರೆತರುವ ಬಾಡಿಗೆ ಜನರಲ್ಲ. ಅವರೆಲ್ಲರೂ ಸ್ವಂತದ ಹಣ ಖರ್ಚು ಮಾಡಿಕೊಂಡು, ಸಮಾವೇಶದ ಶುಲ್ಕವನ್ನು ನೀಡಿ, ಗಣವೇಶವನ್ನು ಕೊಂಡು, ಸ್ವಂತದ ಕೆಲಸ ಕಾರ್ಯಗಳಿಗೆ ರಜೆ ಹಾಕಿ ಬಂದು ಭಾಗವಹಿಸುವ ದೇಶಭಕ್ತ ಯುವಕರು.

ಇದೀಗ ದೇಶವು ಕರೋನಾ ಮಾರಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ದೇಶಾದ್ಯಂತ ಸಂಘದ ಸ್ವಯಂಸೇವಕರು ಲಕ್ಷಾಂತರ ಜನರಿಗೆ ಆಹಾರ-ಔಷಧಗಳನ್ನು ತಲುಪಿಸಿದ್ದಾರೆ. ಕರೋನಾ ಮಾರಿಗೆ ಬಲಿಯಾದವರ ಅಂತ್ಯಕ್ರಿಯೆಗೆ ಕುಟುಂಬದ ಸದಸ್ಯರೇ ಹಿಂದೇಟು ಹಾಕುತ್ತಿರುವಾಗ, ಸಂಘದ ಸ್ವಯಂಸೇವಕರು ಮುಂದೆ ನಿಂತು ನೆರವೇರಿಸಿದ್ದಾರೆ. ಇದಾವುದೂ ಪ್ರಚಾರಕ್ಕಾಗಿ ಅಥವಾ ಯಾರನ್ನೋ ಒಲಿಸಿಕೊಳ್ಳುವುದಕ್ಕಾಗಿ ಮಾಡಿದ್ದಲ್ಲ. ನೈಜ ರಾಷ್ಟ್ರಭಕ್ತಿಯಿಂದ, ನಿಃಸ್ವಾರ್ಥ ಸೇವಾ ಮನೋಭಾವನೆಯಿಂದ ಮಾಡಿರುವಂತಹುದು. ಆರೆಸ್ಸೆಸ್ ಪ್ರೇರಣೆಯಿಂದ ಆರೆಸ್ಸೆಸ್ ಸ್ವಯಂಸೇವಕರು ಪ್ರಾರಂಭಿಸಿರುವ ಸಮಾಜಮುಖೀ ಸಂಸ್ಥೆಗಳು ನೂರಾರು. ಕಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ 1955ರಲ್ಲಿ ಪ್ರಾರಂಭವಾದ ಭಾರತೀಯ ಮಜ್ದೂರ್ ಸಂಘವು, ಒಂದು ಕೋಟಿಗೂ ಅಧಿಕ ಸದಸ್ಯರನ್ನು ಹೊಂದಿದ್ದು, ದೇಶದ ಅತ್ಯಂತ ದೊಡ್ಡ ಕಾರ್ಮಿಕ ಸಂಘಟನೆಯಾಗಿದೆ. ಹಿಂದು ಧರ್ಮದ ರಕ್ಷಣೆಯ ಉದ್ದೇಶದಿಂದ 1964ರಲ್ಲಿ ಪ್ರಾರಂಭವಾದ ವಿಶ್ವ ಹಿಂದು ಪರಿಷದ್ ಹತ್ತಿರ ಹತ್ತಿರ ಒಂದು ಕೋಟಿ ಸದಸ್ಯರನ್ನು ಹೊಂದಿದೆ. ಕೇವಲ ಧಾರ್ಮಿಕ ಕಾರ್ಯವಷ್ಟೇ ಅಲ್ಲದೆ ಆರೋಗ್ಯ, ಶಿಕ್ಷಣ, ಇತ್ಯಾದಿ ಕ್ಷೇತ್ರಗಳಲ್ಲೂ ಅದು ಕಾರ್ಯ ಮಾಡುತ್ತಿದ್ದು, 1,00,000 ದಷ್ಟು ಸೇವಾ ಪ್ರಕಲ್ಪಗಳನ್ನು ನಡೆಸುತ್ತಿದೆ. ಅಯೋಧ್ಯೆಯ ರಾಮಜನ್ಮಸ್ಥಾನದಲ್ಲಿ ರಾಮಮಂದಿರ ಪುನರ್ನಿರ್ಮಾಣದ ಆಂದೋಳನದ ನೇತೃತ್ವವನ್ನು ವಹಿಸಿದ್ದೂ ವಿಶ್ವ ಹಿಂದು ಪರಿಷದ್. ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಿ, ಅವರೂ ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ಕೈಜೋಡಿಸುವಂತೆ ಮಾಡುವ ಉದ್ದೇಶದಿಂದ 1949ರಲ್ಲಿ ಪ್ರಾರಂಭವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಇಂದು ದೇಶದ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ. ಅದು ದೇಶದ ಎಲ್ಲ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಸಕ್ರಿಯವಾಗಿದೆ ಮತ್ತು ಅಲ್ಲಿ ನಡೆಯುವ ಚುನಾವಣೆಗಳಲ್ಲಿ ಬಹುಮತದಿಂದ ಗೆದ್ದು ಬರುತ್ತಿದೆ. ಸಮಾಜದ ಮುಖ್ಯಪ್ರವಾಹದಿಂದ ದೂರವಾಗಿ, ನಾಗರೀಕ ಸೌಲಭ್ಯಗಳಿಂದ ವಂಚಿತರಾಗಿ ಬದುಕುತ್ತಿರುವ ಕೋಟ್ಯಂತರ ವನವಾಸಿಗಳ ಮಧ್ಯೆ ಕೆಲಸ ಮಾಡುತ್ತಿರುವ ವನವಾಸಿ ಕಲ್ಯಾಣ ಆಶ್ರಮವು ಕೆಲಸ ಆರಂಭಿಸಿದ್ದು 1952 ರಲ್ಲಿ ಮಧ್ಯಪ್ರದೇಶದ ಜಶ್ಪುರದಲ್ಲಿ. ಅದೀಗ ದೇಶದ 447 ಜಿಲ್ಲೆಗಳಲ್ಲಿನ 52,323 ಗ್ರಾಮಗಳಲ್ಲಿ ಕಾರ್ಯ ಮಾಡುತ್ತಿದ್ದು 20,266 ಸೇವಾ ಪ್ರಕಲ್ಪಗಳನ್ನು ನಡೆಸುತ್ತಿದೆ. 926 ಜನ ಪೂರ್ಣಾವಧಿ ಕಾರ್ಯಕರ್ತರು ಸ್ವಂತದ ಎಲ್ಲವನ್ನೂ ತ್ಯಾಗಮಾಡಿ ವನವಾಸಿಗಳ ಅಭ್ಯುದಯಕ್ಕಾಗಿ ದುಡಿಯುತ್ತಿದ್ದಾರೆ. ಈ ರೀತಿಯ ಹಲವಾರು ಸಂಘಟನೆಗಳು ಆರೆಸ್ಸೆಸ್ ಪ್ರೇರಣೆಯಿಂದ ನಡೆಯುತ್ತಿದ್ದು, ಆಯಾ ಕ್ಷೇತ್ರಗಳಲ್ಲಿ ಜನಜಾಗೃತಿಯ ಕಾರ್ಯ ಮಾಡುತ್ತಿವೆ. ಆರೆಸ್ಸೆಸ್ ನೇತೃತ್ವದಲ್ಲಿ 1,50,000 ಸೇವಾ ಚಟುವಟಿಕೆಗಳು ನಡೆಯುತ್ತಿವೆ.

Image may be NSFW.
Clik here to view.

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ 500 ವರ್ಷಗಳ ಸಂಘರ್ಷ ನಡೆಯಿತು. ಇನ್ನು ಕೆಲವೇ ದಿನಗಳಲ್ಲಿ ಅಲ್ಲೊಂದು ಭವ್ಯ ಮಂದಿರ ತಲೆಎತ್ತಿ ನಿಲ್ಲಲಿದೆ. ಈ ಗೆಲುವು ಸಾಧ್ಯವಾಗಿದ್ದು ಸಾಧುಸಂತರ ಮತ್ತು ಹಿಂದುಸಮಾಜದ ದೃಢಸಂಕಲ್ಪಕ್ಕೆ ಸಂಘ ಮತ್ತು ವಿಹಿಂಪಗಳು ಬೆಂಬಲವಾಗಿ ನಿಂತು, ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದರಿಂದಲೇ ಎಂದು ಬೇರೆ ಹೇಳಬೇಕಾಗಿಲ್ಲ. ಆರೆಸ್ಸೆಸ್ ದೇಶಕ್ಕೆ ಇಬ್ಬರು ಪ್ರಧಾನಮಂತ್ರಿಗಳನ್ನು ನೀಡಿದೆ. ಅವರಿಬ್ಬರೂ ಸ್ವಾತಂತ್ರ್ಯೋತ್ತರ ಭಾರತದ ಅತ್ಯಂತ ಜನಪ್ರಿಯ ಪ್ರಧಾನಿಗಳೆಂದು ಸುಪ್ರಸಿದ್ಧರಾಗಿದ್ದಾರೆ. ಇಂದಿನ ನಮ್ಮ ರಾಷ್ಟ್ರಪತಿಗಳೂ ಆರೆಸ್ಸೆಸ್ ಸ್ವಯಂಸೇವಕರೇ. ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರದ ಅನೇಕ ಮಂತ್ರಿಗಳು ಆರೆಸ್ಸೆಸ್ ಸ್ವಯಂಸೇವಕರು.

ಸಂಘದ ಕಾರ್ಯ ಇಂದು ಎಲ್ಲೆಡೆ ತಲುಪುತ್ತಿದೆ, ಎಲ್ಲರನ್ನೂ ತಲುಪುತ್ತಿದೆ. ಗ್ರಾಮ-ನಗರಗಳ, ಎಲ್ಲ ಮತ, ಜಾತಿ, ಪಂಥ, ಭಾಷೆ, ಪ್ರಾಂತಗಳಿಗೆ ಸೇರಿದ ಜನರು ಆರೆಸ್ಸೆಸ್‍ನಲ್ಲಿದ್ದಾರೆ. ಎಲ್ಲ ಅಂತರ, ಭೇದಗಳನ್ನು ಮೀರಿದ ‘ನಾವೆಲ್ಲ ಹಿಂದು’ ಎಂಬ ಭಾವದಿಂದಾಗಿ ಉಚ್ಚ-ನೀಚ ಭಾವವಾಗಲೀ, ಅಸ್ಪೃಷ್ಯತೆಯಂತಹ ಕುರೂಢಿಗಳಾಗಲೀ ಸಂಘದಲ್ಲಿ ಕಾಣಬರುವುದಿಲ್ಲ. ಜಾತಿ-ಜಾತಿಗಳ ಹೆಸರಿನಲ್ಲಿ, ಪ್ರಾಂತ-ಭಾಷೆಗಳ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಛಿದ್ರವಿಚ್ಛಿದ್ರವಾಗಿದ್ದ ಹಿಂದುಸಮಾಜದಲ್ಲಿ ಈಗ ನಾವೆಲ್ಲ ಹಿಂದುಗಳು ಎಂಬ ಅಭಿಮಾನ ಮೂಡುತ್ತಿರುವುದರಲ್ಲಿ ಸಂಘದ ಯೋಗದಾನವಿದೆ. ಹಿಂದು ಎಂದರೆ ಹೇಡಿ, ದುರ್ಬಲ. ಆತನ ಕೈಯ್ಯಲ್ಲಿ ಏನೂ ಸಾಧ್ಯವಿಲ್ಲ. ಹಿಂದುಗಳನ್ನು ಸಂಘಟನೆ ಮಾಡುವುದು ಅಸಾಧ್ಯ ಇತ್ಯಾದಿ ಮೂದಲಿಸುತ್ತಿದ ಕಾಲ ದೂರವಾಗಿದೆ. ಹಿಂದು ಸಂಘಟಿತನಾಗಬಲ್ಲ ಎಂಬುದು ಇಂದು ಸಿದ್ಧವಾಗಿದೆ. ದೇಶ-ಧರ್ಮಗಳಿಗೆ ಅಪಮಾನವಾದರೆ ಸಂಘಟಿತ ಹಿಂದುಸಮಾಜ ಸಹಿಸದು ಎನ್ನುವ ಸ್ಥಿತಿ ಇಂದು ನಿರ್ಮಾಣವಾಗಿದೆ. ಭಾರತ ಇಡೀ ವಿಶ್ವಕ್ಕೆ ನೇತೃತ್ವ ನೀಡುವ ದಿನಗಳು ಬಹುದೂರವಿಲ್ಲ ಎಂದು ದೇಶವಾಸಿಗಳಿಗೆ ಅನ್ನಿಸುತ್ತಿರುವುದು ನಮ್ಮ ಸಮಾಜದಲ್ಲಿ ಮೂಡುತ್ತಿರುವ ಆತ್ಮವಿಶ್ವಾಸ, ಸ್ವಾಭಿಮಾನಗಳ ಸಂಕೇತ.

Image may be NSFW.
Clik here to view.
ಎಸ್. ಎಸ್. ನರೇಂದ್ರ ಕುಮಾರ್
ಲೇಖಕರು ಹಾಗೂ ‘ಆರೆಸ್ಸೆಸ್ 360’ ಪುಸ್ತಕದ ಅನುವಾದಕರು
Image may be NSFW.
Clik here to view.

Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>