ಆರೆಸ್ಸೆಸ್ ನ ಹಿರಿಯ ಪ್ರಚಾರಕ ಶ್ರೀ ಶಿವಶಂಕರ್ ನವೆಂಬರ್ 30 ರ ಮಧ್ಯಾಹ್ನ ತಮ್ಮ ಬದುಕಿನ ಪಯಣವನ್ನು ಪೂರ್ಣಗೊಳಿಸಿದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಇತ್ತೀಚಿನ ದಿನಗಳಲ್ಲಿ ಅವರು ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಾಕೇಂದ್ರದಲ್ಲಿ ವಾಸಿಸುತ್ತಿದ್ದರು. ಶಿವಶಂಕರ್ ಅವರದ್ದು 42 ವರ್ಷಗಳ ಸುದೀರ್ಘ ಪ್ರಚಾರಕ ಜೀವನ.
ಪರಿಚಯ:
ಶಿವಶಂಕರ್ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಬಾಳೆಹೊನ್ನೂರು ನಡುವಿನ ಕೆಮ್ಮಣ್ಣು ಗ್ರಾಮದಲ್ಲಿ. ಜನಾರ್ಧನಯ್ಯ, ಗೌರಮ್ಮ ದಂಪತಿಗಳ ತುಂಬು ಕುಟುಂಬದ ಏಳು ಮಕ್ಕಳಲ್ಲಿ ಶಿವಶಂಕರ್ ಆರನೆಯವರು. ಶಾಲಾ ಶಿಕ್ಷಣ ಪೂರೈಸಿ ಕಾಲೇಜು ಮೆಟ್ಟಿಲೇರಿದ ಶಿವಶಂಕರ್ ಪಡೆದುಕೊಂಡಿದ್ದು ಬಿ. ಬಿ. ಎಂ. ಪದವಿಯನ್ನು. ನಾಲ್ಕು ದಶಕಗಳ ಹಿಂದಿನ ಬಿ. ಬಿ. ಎಂ. ಅಂದರೆ ಪ್ರಾಯಶಃ ಮೊದಲ ಗುಂಪಿನ ಪದವೀಧರರಿರಬೇಕು. ನಾನು ಮೊದಲ ಬ್ಯಾಚ್ ನ ಬಿ. ಬಿ. ಎಂ. ಪದವೀಧರ ಎಂದು ಅವರೇ ಕೆಲವೊಮ್ಮೆ ಹೇಳುತ್ತಿದ್ದರು. ವಿದ್ಯಾರ್ಥಿ ದಿನಗಳಲ್ಲೇ ಆರೆಸ್ಸೆಸ್ ನ ಸಂಪರ್ಕ. ಶೃಂಗೇರಿ, ಕೊಪ್ಪ, ಕಳಸ, ಸಾಗರದ ಮಲೆನಾಡಿನ ಪರಿಸರದಲ್ಲಿ ಆರೆಸ್ಸೆಸ್ ಬಲಿಷ್ಠ ಹೆಜ್ಜೆಗಳನ್ನು ಇಡುತ್ತಿದ್ದ ದಿನಗಳಲ್ಲಿ ಅದಾಗಲೇ ಕೆಲವರು ಪ್ರಚಾರಕರಾಗಿ ಹೊರಟಿದ್ದರು. ಅದೇ ಸಾಲಿನಲ್ಲಿ ಮಲೆನಾಡಿನಿಂದ ಹೊರಟ ಇನ್ನೋರ್ವ ಪ್ರಚಾರಕ ಶಿವಶಂಕರ್.
ಆರಂಭದ ದಿನಗಳಲ್ಲಿ ಸಕಲೇಶಪುರ ನಂತರ ಬೆಂಗಳೂರು ದಕ್ಷಿಣ ಜಿಲ್ಲೆ, ಶಿವಮೊಗ್ಗದ ಸಹ ಜಿಲ್ಲಾ ಪ್ರಚಾರಕರಾಗಿ ಕೆಲಸ ಮಾಡಿದರು. ಹಲವು ಪ್ರದೇಶಗಳಲ್ಲಿ ಕೆಲಸ ಮಾಡಿದ ಅನುಭವ ಸಮೃದ್ಧಿ ಅವರದ್ದಾಗಿತ್ತು. ತೊಂಭತ್ತರ ದಶಕದ ಅಂತ್ಯದಲ್ಲಿ ಶಿವಮೊಗ್ಗ ಜಿಲ್ಲೆ ಕಂಡ ಸಂಘಕಾರ್ಯದ ತ್ವರಿತ ಏರಿಕೆಯನ್ನು ಸ್ಥಿರಗೊಳಿಸುವ ಹೊಣೆ ಹೊತ್ತವರು ಶಿವಶಂಕರ್.

ಮಂಗಳೂರು ಮತ್ತು ಬೆಂಗಳೂರಿನ ಆರೆಸ್ಸೆಸ್ ಕಾರ್ಯಾಲಯಗಳ ಪ್ರಮುಖರಾಗಿ ಹಲವು ವರ್ಷ ಶಿವಶಂಕರ್ ಕೆಲಸ ಮಾಡಿದ್ದಾರೆ. ಅವರ ಸದಾ ಹಸನ್ಮುಖಿ, ನಿರುದ್ವಿಗ್ನ, ಮೃದು – ಮಿತ ಭಾಷಿ ಗುಣಗಳು ಶಿವಶಂಕರ್ ಅವರ ಸಂಪರ್ಕಕ್ಕೆ ಬಂದವರು ಗುರುತಿಸುತ್ತಿದ್ದರು. ಅವರೊಂದಿಗಿನ ಬಹುತೇಕ ಎಲ್ಲರ ಅನುಭವವೂ ಇದೇ ಅಗಿತ್ತು. ಆಪ್ತವಲಯದಲ್ಲಿ ಅವರು “ಅಣ್ಣಯ್ಯ” ಎಂದೇ ಪರಿಚಿತರು.
ಶಿವಶಂಕರ್ ಅವರಿಗೆ ಆತ್ಮೀಯರಾಗಿದ್ದವರನ್ನು ಸಂಪರ್ಕಿಸಿದಾಗ, ಭಗವದ್ಗೀತೆಯ “ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್” ಸಾಲನ್ನು ಉದ್ಧರಿಸುತ್ತ ಇದು ನಮ್ಮ ಅಣ್ಣಯ್ಯನ ಬದುಕನ್ನು, ಸ್ವಭಾವವನ್ನು ಸರಿಯಾಗಿ ಹಿಡಿದಿಡುತ್ತದೆ ಎಂದರು.
ಆರೆಸ್ಸೆಸ್ ನ ಸಹ ಸರಕಾರ್ಯವಾಹ ಶ್ರೀ ಮುಕುಂದ, ಕ್ಷೇತ್ರ ಸಂಘಚಾಲಕ ವಿ. ನಾಗರಾಜ್, ಪ್ರಾಂತ ಸಂಘಚಾಲಕ ಮ. ವೆಂಕಟರಾಮು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
The post ಆರೆಸ್ಸೆಸ್ ನ ಹಿರಿಯ ಪ್ರಚಾರಕ ಶ್ರೀ ಶಿವಶಂಕರ್ ನಿಧನ #ಶ್ರದ್ಧಾಂಜಲಿ #ಓಂ_ಶಾಂತಿ first appeared on Vishwa Samvada Kendra.