Clik here to view.

ನವದೆಹಲಿ: ಮುಂದಿನ ವರ್ಷದ ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಯೋಗ, ಕಳರಿಯಪಟ್ಟು, ಮಲ್ಲಕಂಬ, ಗಟ್ಕಾ ಮತ್ತು ತಂಗ್ಟಾಗಳನ್ನು ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಯುವಕರನ್ನು ಕ್ರೀಡೆಗಳತ್ತ ಆಕರ್ಷಿಸಲು ಹಾಗೂ ಅವರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರ 2018ರಿಂದ ಪ್ರತೀ ವರ್ಷ ಖೇಲೋ ಇಂಡಿಯಾ ಯೂತ್ ಗೇಮ್ಸ್ ನ್ನು ಆಯೋಜಿಸುತ್ತಿದೆ.
ಈ ಸ್ಪರ್ಧೆಯಲ್ಲಿ ಮುಂದಿನ ವರ್ಷದಿಂದ ಯೋಗಾಸನವನ್ನು ಸೇರಿಸಲಾಗುವುದು. ಒಟ್ಟು ಏಳು ವಿಭಾಗದಲ್ಲಿನಾಲ್ಕು ವಿಧದ ಸ್ಪರ್ಧೆ ನಡೆಸಿ 51 ಪದಕಗಳ ವಿತರಣೆಗೆ ಪ್ರಸ್ತಾಪ ಸಲ್ಲಿಸಲಾಗಿದೆ. ಸಾಂಪ್ರದಾಯಿಕ ಯೋಗಾಸನ, ಕಲಾತ್ಮಕ ಯೋಗಾಸನ, ಲಯಬದ್ಧ ಯೋಗಾಸನ ಮತ್ತು ವೈಯಕ್ತಿಕ ಸಮಗ್ರ ಹಾಗೂ ತಂಡ ಚಾಂಪಿಯನ್‌ಷಿಪ್, ಪ್ರಸ್ತಾಪವಾಗಿರುವ ಸ್ಪರ್ಧೆಗಳು ಎಂದು ಕೇಂದ್ರ ಸಚಿವರಾದ ಕಿರಣ್ ರಿಜಿಜು ಅವರು ತಿಳಿಸಿದರು.
ಇದೇ ರೀತಿ ಕಳರಿಯಪಟ್ಟು, ಮಲ್ಲಕಂಬ, ಗಟ್ಕಾ ಮತ್ತು ತಂಗ್ಟಾ – ಈ ಭಾರತೀಯ ಕ್ರೀಡೆಗಳನ್ನು ಖೇಲೋ ಇಂಡಿಯಾ ಸ್ಪರ್ಧೆಗೆ ಸೇರಿಸಲಾಗಿದೆ ಎಂದರು.
ಇತ್ತೀಚೆಗೆ ಭಾರತೀಯ ಕ್ರೀಡಾ ಸಚಿವಾಲಯವು ಯೋಗ ಕಲೆಗೆ ಸ್ಪರ್ಧಾತ್ಮಕ ಕ್ರೀಡೆಯ ಮಾನ್ಯತೆ ಕಲ್ಪಿಸಿತ್ತು. ಇದರಿಂದ ಯೋಗಾಸನ ಕ್ರೀಡಾಕೂಟಗಳಿಗೆ ಕೇಂದ್ರ ಸರಕಾರದ ಅನುದಾನ ದೊರೆಯಲಿದೆ.
Clik here to view.

2019ರ ನವೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಯೋಗಾಸನ ಕ್ರೀಡಾ ಒಕ್ಕೂಟ ಸೃಷ್ಟಿಸಿ, ಯೋಗ ಗುರು ಬಾಬಾ ರಾಮ್‌ದೇವ್ ಅವರನ್ನು ಅಧ್ಯಕ್ಷರಾಗಿ ಹಾಗೂ ಬೆಮಗಳೂರಿನ ಎಸ್-ವ್ಯಾಸದ ಕುಲಪತಿ ಡಾ. ಎಚ್. ಆರ್. ನಾಗೇಂದ್ರ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಈ ಸಂಸ್ಥೆಗೆ ಕಳೆದ ತಿಂಗಳು ರಾಷ್ಟ್ರೀಯ ಕ್ರೀಡಾ ಒಕ್ಕೂಟದ (ಎನ್‌ಎಸ್‌ಎಫ್) ಮಾನ್ಯತೆಯನ್ನು ಕ್ರೀಡಾ ಸಚಿವಾಲಯ ಕಲ್ಪಿಸಿತ್ತು. ರಾಷ್ಟ್ರೀಯ ಯೋಗ ಕ್ರೀಡಾ ಒಕ್ಕೂಟಕ್ಕೆ ಕ್ರೀಡಾ ಇಲಾಖೆ ಅನುದಾನ ನೀಡಲಿದ್ದು, ಅದರ ಮೂಲಕ ವಾರ್ಷಿಕ ತರಬೇತಿ ಶಿಬಿರಗಳು ಹಾಗೂ ಕ್ರೀಡಾಕೂಟಗಳು ಆಯೋಜನೆಯಾಗಲಿವೆ ಎಂದು ರಿಜಿಜು ತಿಳಿಸಿದರು.
The post ಖೇಲೋ ಇಂಡಿಯಾ ಸ್ಪರ್ಧೆಗೆ ಯೋಗ, ಕಳರಿಯಪಟ್ಟು, ಮಲ್ಲಕಂಬ ಸೇರ್ಪಡೆ first appeared on Vishwa Samvada Kendra.