
ನವದೆಹಲಿ: ಜಗತ್ತಿನ ಅತ್ಯಂತ ದೊಡ್ಡ ಲಸಿಕೆ ಅಭಿಯಾನದ ಎರಡನೇ ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬೆಳಿಗ್ಗೆ 9 ಗಂಟೆಗೆ ಚಾಲನೆ ನೀಡಿದರು. ಚಾಲನೆಗೊಂಡ 3ಗಂಟೆಗಳಲ್ಲಿ (ಸೋಮವಾರ ಮಧ್ಯಾಹ್ನ 1 ಗಂಟೆಯ ವೇಳೆಗಾಗಲೇ) 10 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್–19 ಲಸಿಕೆಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಭಾರತ ಸರ್ಕಾರದ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೋವಿಡ್–19 ತಡೆಯ ಎರಡನೇ ಹಂತದ ಲಸಿಕೆ ಕಾರ್ಯಕ್ರಮ ದೇಶದಾದ್ಯಂತ ಮಾರ್ಚ್ 1 ಆರಂಭವಾಗಲಿದೆ. ಅರ್ಹ ವ್ಯಕ್ತಿಗಳು ಲಸಿಕೆ ಪಡೆಯುವುದಕ್ಕಾಗಿ ಕೋ–ವಿನ್ ಆ್ಯಪ್ ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕ ಸಮಯ ಕಾಯ್ದಿರಿಸಬಹುದು.
60 ವರ್ಷ ವಯಸ್ಸಿಗೂ ಮೇಲ್ಪಟ್ಟ ವರು ಹಾಗೂ ಇತರ ಗಂಭೀರ ಕಾಯಿಲೆ ಗಳಿಂದ ಬಳಲುವ, 45 ವರ್ಷಕ್ಕೂ ಮೇಲ್ಪಟ್ಟವರಿಗೆ ಈ ಹಂತದಲ್ಲಿ ಲಸಿಕೆ ಹಾಕಲಾಗುತ್ತದೆ. ಸುಮಾರು 27 ಕೋಟಿ ಜನರು ಇದರ ಲಾಭ ಪಡೆಯಲಿದ್ದಾರೆ.
ಲಸಿಕೆ ನೀಡಲು ಕೇಂದ್ರ ಸರ್ಕಾರವು 8,600ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿದ್ದು, ಇಲ್ಲಿ ಲಸಿಕೆ ನೀಡಲಾಗುತ್ತದೆ. ಲಸಿಕೆ ನೀಡಿಕೆಗಾಗಿ ರಾಜ್ಯದಲ್ಲಿ 250ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಪ್ರತಿ ದಿನ ಸಂಜೆ 3 ಗಂಟೆಯವರೆಗೆ ಈ ಆಸ್ಪತ್ರೆಗೆ ಭೇಟಿ ನೀಡಿಯೂ ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದು ಅದು ತಿಳಿಸಿದೆ.
ಯಾರು ಅರ್ಹರು?
ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಲು ಯಾರು ಅರ್ಹರು ಎಂಬುದನ್ನು ಆರೋಗ್ಯ ಸಚಿವಾಲಯವು ಪಟ್ಟಿ ಮಾಡಿದೆ.
60 ವರ್ಷ ದಾಟಿದವರು ಮತ್ತು 2022ರ ಜನವರಿ 1ಕ್ಕೆ 60 ವರ್ಷ ತುಂಬುವವರು, ಇತರ ಗಂಭೀರ ಕಾಯಿಲೆ ಗಳಿಂದ ಬಳಲುವ 2022ರ ಜನವರಿ 1ಕ್ಕೆ 45 ವರ್ಷ ತುಂಬುವವರು ಮತ್ತು ಈಗಾಗಲೇ 45 ದಾಟಿದವರು ಕೂಡ ನೋಂದಣಿಗೆ ಅರ್ಹರು.
ನೋಂದಣಿಗೆ ಏನು ಬೇಕು?:
ಒಂದು ಮೊಬೈಲ್ ಸಂಖ್ಯೆ ನೀಡಿ ಗರಿಷ್ಠ ನಾಲ್ಕು ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಬಹುದು.
ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಎನ್‌ಪಿಆರ್ ಸ್ಮಾರ್ಟ್ ಕಾರ್ಡ್, ಭಾವಚಿತ್ರ ಇರುವ ಪೆನ್ಶನ್ ಪತ್ರದಲ್ಲಿ ಯಾವುದಾದರೂ ಒಂದನ್ನು ಬಳಸಿ ನೋಂದಣಿ ಮಾಡಬಹುದು.
ಮೊದಲ ಹಂತ : ರಾಜ್ಯದ 6 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ
ರಾಜ್ಯದಲ್ಲಿ ಜ.16 ರಿಂದ ಪ್ರಾರಂಭವಾಗಿದ್ದ ಮೊದಲ ಹಂತದ ಅಭಿಯಾನದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಈವರೆಗೆ 4,47,267 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 1,58,575 ಮಂದಿ ಮುಂಚೂಣಿ ಯೋಧರು ಲಸಿಕೆ ಪಡೆದುಕೊಂಡಿದ್ದಾರೆ