
ವಿದೇಶೀ ದುಸ್ಸಾಹಸ ತಡೆಗಟ್ಟುವ ನಿಟ್ಟಿನಲ್ಲಿ ಗಡಿ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ 3 ಗ್ರಾಮಗಳನ್ನು ನಿರ್ಮಿಸಲಾಗುವುದು ಎಂದು ಅರುಣಾಚಲ ಪ್ರದೇಶ ಸರ್ಕಾರ ಘೋಷಿಸಿದೆ.
ಹಣಕಾಸು ಸಚಿವ ಚೋವ್ನಾ ಮೈನ್ ಅವರು ಬುಧವಾರ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಗ್ರಾಮಗಳ ನಿರ್ಮಾಣ ಈ ಯೋಜನೆಯನ್ನು ಪ್ರಕಟಿಸಿದರು.
ರಾಜ್ಯದ ಪೂರ್ವ, ಕೇಂದ್ರೀಯ ಮತ್ತು ಪಶ್ಚಿಮ ಭಾಗಗಳಲ್ಲಿ ಈ ಗ್ರಾಮಗಳನ್ನು ನಿರ್ಮಿಸಲಾಗುವುದು. ಮೂರು ಗ್ರಾಮಗಳ ನಿರ್ಮಾಣಕ್ಕಾಗಿ 30 ಕೋಟಿ ರೂ. ನಿಗದಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಮತ್ತಷ್ಟು ಗ್ರಾಮಗಳನ್ನು ಅಭಿವೃದ್ದಿ ಪಡಿಸಲಾಗುವುದು ಹಾಗೂ ಗಡಿಗಳಲ್ಲಿರುವ ಗ್ರಾಮಗಳಿಗೆ ರಸ್ತೆ ಸಂಪರ್ಕ, ವಿದ್ಯುತ್, ನೀರು, ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಕಲ್ಪಿಸಲಾಗುವುದು ಎಂದು ಚೋವ್ನಾ ಮೈನ್ ತಿಳಿಸಿದರು.
ಇತ್ತೀಚೆಗೆ ಉತ್ತರಾಖಂಡ ಸರ್ಕಾರ ಭಾರತ-ಚೀನಾ ಗಡಿಯ 100 ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಿತ್ತು. ಈ ಗ್ರಾಮಗಳನ್ನು ಮಾದರಿ ಕೃಷಿ ಗ್ರಾಮಗಳನ್ನಾಗಿ ಪರಿವರ್ತಿಸಿ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಾಖಂಡ ಕೃಷಿ ಸಚಿವ ಸುಬೋಧ್ ಉನ್ಯಾಲ್ ಹೇಳಿದ್ದಾರೆ. ಈ ಗ್ರಾಮಗಳಲ್ಲಿ ಮೀನುಗಾರಿಕೆ, ಹೈನುಗಾರಿಕೆ, ಜೇನು ಸಾಕಣೆಗೂ ಆದ್ಯತೆ ನೀಡಿ ಕೃಷಿ ಹಾಗೂ ತೋಟಗಾರಿಕೆಗೆ ಉತ್ತೇಜಿಸಲಾಗುವುದು. ಇದರಿಂದಾಗಿ ಜನರಿಗೆ ಗ್ರಾಮದಲ್ಲೇ ಉದ್ಯೋಗ ದೊರಕಿ ವಲಸೆ ತಪ್ಪುತ್ತದೆ. ಮತ್ತು ಗಡಿ ಭಾಗದಲ್ಲಿ ಸಮೃದ್ಧಿ ಸೃಷ್ಟಿಯಾಗುತ್ತದೆ ಎಂದಿದ್ದಾರೆ