Quantcast
Channel: News – Vishwa Samvada Kendra
Viewing all articles
Browse latest Browse all 1745

ಮಾದರಿ ಶಿಕ್ಷಕಿ : ಮಕ್ಕಳನ್ನು ಸರ್ಕಾರೀ ಶಾಲೆಗಳತ್ತ ಕರೆತರಲು ವಿನೂತನ ಪ್ರಯತ್ನ ಮಾಡಿದ ರೇಖಾ ಪ್ರಭಾಕರ್

$
0
0

ಶಿವಮೊಗ್ಗ: ಸರ್ಕಾರೀ ಶಾಲೆಗಳ ಬಗೆಗೆ ಜನಸಾಮಾನ್ಯರ ಅಸಡ್ಡೆ, ಹಾಗೂ ಇನ್ನಿತರ ಕಾರಣಗಳಿಗಾಗಿ  ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವುದು ಇಂದು ಎಲ್ಲೆಡೆ ಕಂಡುಬರುವ ದೃಶ್ಯ. ಶಿಕ್ಷಕಿಯೊಬ್ಬರ ಪ್ರಯತ್ನದಿಂದ ವ್ಯವಸ್ಥೆಯ ಸುಧಾರಣೆ, ಬದಲಾವಣೆ ಕಷ್ಟವಲ್ಲ ಎಂಬುದಕ್ಕೆ  ರೇಖಾ ಪ್ರಭಾಕರ್‌ ಉದಾಹರಣೆಯಾಗಿದ್ದಾರೆ.

ರೇಖಾ ಪ್ರಭಾಕರ್ ಮೂಲತಃ ಕುಂದಾಪುರ ತಾಲೂಕಿನ ಶಂಕರನಾರಾಯಣದವರು. ಪ್ರಸ್ತುತ ಹೊಸನಗರ ತಾಲೂಕಿನ ನೂಲಿಗ್ಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.

ಐದಾರು ವರ್ಷಗಳ ಹಿಂದೆ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಇಳಿಮುಖವಾಗತೊಡಗಿತ್ತು. ಇದನ್ನು ಗಮನಿಸಿದ ಶಿಕ್ಷಕಿ ರೇಖಾ ಮಕ್ಕಳನ್ನು ಶಾಲೆಗೆ ಆಕರ್ಷಿಸುವ ನಿಟ್ಟಿನಲ್ಲಿ ಯೋಜನೆಯೊಂದನ್ನು ಸಿದ್ಧಪಡಿಸಿಕೊಂಡರು. ಶಾಲೆಗೆ ದಾಖಲಾಗುವ ಪ್ರತಿ ಮಗುವಿನ ಹೆಸರಿಗೆ ತಾವೇ ವೈಯಕ್ತಿಕವಾಗಿ 1000 ರೂ.ಗಳನ್ನು ಬ್ಯಾಂಕ್‌ ಠೇವಣಿ ಇಡುವುದಾಗಿ ಘೋಷಿಸಿದರು. ಆರ್ಥಿಕವಾಗಿ ಕೆಳಮಟ್ಟದಲ್ಲಿರುವ ಕುಟುಂಬಗಳಿಗೆ ಇದು ಸಣ್ಣ ಮೊತ್ತವಲ್ಲ. ಇದರಿಂದ ಶಾಲೆಯಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಯಿತು. ಅಷ್ಟಕ್ಕೇ ಸುಮ್ಮನಾಗದೇ ಶಿಕ್ಷಕಿ ಪ್ರತಿ ವರ್ಷ ದಾಖಲಾಗುವ ಮಗುವಿನ ಹೆಸರಿನಲ್ಲಿಯೂ ಠೇವಣಿ ಇಡುವುದಾಗಿ ಘೋಷಿಸಿ, ಯೋಜನೆ ಮುಂದುವರಿಸಿದರು. 1ನೇ ತರಗತಿಗೆ ದಾಖಲಾದಾಗ ಮಗುವಿನ ಹೆಸರಿನಲ್ಲಿ 1 ಸಾವಿರ ರೂ. ನಿಖರ ಠೇವಣಿ ಇಟ್ಟು, ಆ ವಿದ್ಯಾರ್ಥಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗುವ ವೇಳೆಗೆ ಮಗುವಿಗೆ ಬಡ್ಡಿಯ ಸಮೇತ ಹಣ ದೊರಕಬೇಕು ಎನ್ನುವಂತೆ ವ್ಯವಸ್ಥೆ ಮಾಡಿದ್ದಾರೆ. . ಇದಕ್ಕಾಗಿ ಅವರು ಬಳಸಿರುವುದು ತಮ್ಮ ಸ್ವಂತ ಹಣವನ್ನು.

ವಿದ್ಯಾರ್ಥಿಗಳನ್ನು ಆಕರ್ಷಿಸಲು ಯಶಸ್ವಿಯಾದ ಯೋಜನೆಯ ಫಲವಾಗಿ ಇಂದು ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಮಾತ್ರವಲ್ಲ, ಶಾಲೆಯ ಸಹಪಠ್ಯ ಚಟುವಟಿಕೆಗಳಲ್ಲೂಉತ್ತಮ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ಪ್ರಸಕ್ತ ವರ್ಷ 15 ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿ ಕಲಿಯುತ್ತಿದ್ದಾರೆ. ರೇಖಾ ಅವರು 2015ರಿಂದ ಈವರೆಗೆ ಒಟ್ಟು 50 ವಿದ್ಯಾರ್ಥಿಗಳ ಹೆಸರಿನಲ್ಲಿ ತಲಾ 1 ಸಾವಿರ ರೂ. ಠೇವಣಿ ಇಟ್ಟಿರುವುದು ಗಮನಾರ್ಹವಾಗಿದೆ. ಪ್ರಸ್ತುತ  ಶಾಲೆಯಲ್ಲಿ1ರಿಂದ 7ನೇ ತರಗತಿಯ ವರೆಗೆ ಪ್ರಸಕ್ತ ವರ್ಷ 69 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ರೇಖಾ ಅವರು, ಬಾಲ್ಯದಲ್ಲಿ ಕಷ್ಟ ಪಟ್ಟು ಓದಿದ್ದೇನೆ. ಶಿಕ್ಷಣ ಪಡೆಯಲು ನನಗೆ ಹಲವು ಸಂಘ ಸಂಸ್ಥೆಗಳು, ಶಿಕ್ಷಕರು ಸಹಾಯ ಮಾಡಿದ್ದಾರೆ. ಅವರ ಸಹಾಯದಿಂದ ನಾನು ಈ ಮಟ್ಟಕ್ಕೆ ಏರಿದ್ದೇನೆ. ಸರ್ಕಾರಿ ಹುದ್ದೆ ಗಳಿಸಿದ್ದೇನೆ. ನನಗೆ ಸಹಕಾರ ನೀಡಿರುವ ಈ ಸಮಾಜಕ್ಕಾಗಿ ನಾನು ಏನಾದರೂ ಕೊಡುಗೆ ನೀಡಬೇಕು ಎನ್ನುವ ಆಕಾಂಕ್ಷೆಯಿಂದ ಈ ಕಾರ್ಯ ಕೈಗೊಂಡಿದ್ದೇನೆ. ನಾವೂ ನಮ್ಮ ಕೈಲಾದಷ್ಟು ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕೆಂಬ ಅಪೇಕ್ಷೆ ಇಟ್ಟುಕೊಂಡು ಈ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ.

ರೇಖಾ ಅವರ ಪತಿ ಪ್ರಭಾಕರ್ ಅವರು ಅರಣ್ಣ ಇಲಾಖೆಯ ನೌಕರರು. ಪತ್ನಿಯ ಈ ಕಾರ್ಯಕ್ಕೆ ಅವರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ.


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>