
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಂದಿದೆ. ಹಲವು ಅಚ್ಚರಿ, ವಿಶೇಷತೆಗಳನ್ನು ಕಾಣಬಹುದಾಗಿದೆ. ಈ ಬಾರಿ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸೋತರು, ಆದರೆ ಟಿಎಂಸಿ ಅಭೂತಪೂರ್ವ ಯಶಸ್ಸು ಕಂಡಿತು. ಕೇವಲ 3 ಶಾಸಕರಿದ್ದ ಬಿಜೆಪಿ ನಿರೀಕ್ಷಿತ ಯಶಸ್ಸು ಗಳಿಸದಿದ್ದರೂ 77 ಶಾಸಕರನ್ನುಶಾಸನಸಭೆಗೆ ಕಳುಹಿಸಿದ್ದು ಕಡಮೆಯೇನಲ್ಲ.
ಈ ಮಧ್ಯೆ ಓರ್ವ ಮಹಿಳಾ ಅಭ್ಯರ್ಥಿ ಜಯ ಗಳಿಸಿರುವುದು ವಿಶೇಷ ಸುದ್ದಿಯಾಗಿದೆ. ಅದು ಬಿಜೆಪಿ ಅಭ್ಯರ್ಥಿ ಚಂದನಾ ಬೌರಿ, ಇವರ ಗೆಲುವು ಐತಿಹಾಸಿಕ ಎಂದು ಬಂಗಾಳದ ಮಾತ್ರವಲ್ಲ ಇಡೀ ದೇಶದ ಜನ ಬಣ್ಣಿಸುತ್ತಿದ್ದಾರೆ. ಚಂದನಾ ಬೌರಿ, ರಾಜಕೀಯ ಕುಟುಂಬಕ್ಕೆ ಸೇರಿದವರಲ್ಲ. ಶ್ರೀಮಂತ ಮನೆತನದವರೂ ಅಲ್ಲ. ಅವರ ಪತಿ ಕೂಲಿ ಕಾರ್ಮಿಕ.
ಸಾಲ್ಟೋರಾ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿದ್ದ ಚಂದನಾ ಅವರು ಟಿಎಂಸಿ ನಾಯಕ ಸಂತೋಷ್ ಕುಮಾರ್ ಮೊಂಡಲ್ ವಿರುದ್ಧ ಸ್ಪರ್ಧಿಸಿ 4ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ.
30 ವರ್ಷದ ಚಂದನಾರ ಪತಿ ಕಲ್ಲು ಕೆಲಸ ಮಾಡುವ ದಿನಗೂಲಿ ನೌಕರ. ಮೂರು ಮಕ್ಕಳ ತಾಯಿ. ಪತಿ ಮತ್ತು ಪತ್ನಿ ಕಷ್ಟಪಟ್ಟು ಹಸು ಮತ್ತು ಆಡುಗಳನ್ನು ಕೂಡ ಸಾಕುತ್ತಿದ್ದಾರೆ. ಇದರಿಂದಲೇ ಬಂದ ಹಣದಿಂದ ಕೂಡಿಟ್ಟು ಸಂಸಾರ ನಡೆಸುತ್ತಿದ್ದಾರೆ.
ಚುನಾವಣಾ ಅಫಿಡವಿತ್ ಪ್ರಕಾರ ಚಂದಾ ಅವರ ಒಟ್ಟು ಆಸ್ತಿ ಮೊತ್ತ ಕೇವಲ 31,985 ರೂಪಾಯಿ (31 ಸಾವಿರದ 985 ರೂಪಾಯಿ) ಹಾಗೂ ತಮ್ಮ ಪತಿಯ ಆಸ್ತಿಯ ಮೊತ್ತ 30,311 ರೂಪಾಯಿ.