ಪಾಸಿಟಿವಿಟಿ ಅನ್ಲಿಮಿಟೆಡ್ ‘ಉಪನ್ಯಾಸಮಾಲಿಕೆಯಲ್ಲಿ ಜೀವನಶೈಲಿಗಿಂತ ಜೀವನವೇ ಮುಖ್ಯ. ಪರಸ್ಪರ ದೂಷಣೆ ಬಿಟ್ಟು, ಒಂದಾಗಿ ಈ ಸಂಕಷ್ಟವನ್ನು ಎದುರಿಸೋಣ’ : ಶ್ರೀ ಸದ್ಗುರು ಜಗ್ಗಿ ವಾಸುದೇವ್
ಕೋವಿಡ್ ಸಾಂಕ್ರಾಮಿಕದ ಈ ಸವಾಲಿನ ದಿನಗಳಲ್ಲಿ ನಮ್ಮ ದೇಶ ಮಾತ್ರವಲ್ಲ, ಇಡೀ ಮನುಕುಲವೇ ಒಟ್ಟಾಗಿರಬೇಕಾದ ಅಗತ್ಯವಿದೆ. ಯಾರ ನಿಯಂತ್ರಣಕ್ಕೂ ಸಿಗದ ಮಹಾಮಾರಿ ಇದು. ಕಾನೂನು, ಪೊಲೀಸರು, ವೈದ್ಯರು ಮಾತ್ರ ಇದನ್ನು ತಡೆಯಲು ಸಾಧ್ಯವಿಲ್ಲ. ಇದಕ್ಕೆ ನಮ್ಮೆಲ್ಲರ ಸಹಕಾರ ಬೇಕು.

ಸೋಷಿಯಲ್ ಮಿಡಿಯಾದಲ್ಲಿ ಪರಸ್ಪರ ಕಾಲೆಳೆಯುವುದರಿಂದ, ಕೆಸರೆರಚಾಟದಿಂದ ಯಾರಿಗೂ ಉಪಯೋಗವಿಲ್ಲ. ನಾವು ಸಮಸ್ಯೆಗೆ ಪರಿಹಾರ ಹುಡುಕಬೇಕೇ ಹೊರತು ಋಣಾತ್ಮಕ ಚರ್ಚೆ ಸಲ್ಲ. ರೋಷ, ದುಃಖ, ಹತಾಶೆಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದೇ ಹೊರತು ಅದರಿಂದ ಏನೂ ಉಪಯೋಗವಿಲ್ಲ. ಆದ್ದರಿಂದ ಇಂದು ನಾವೆಲ್ಲರೂ ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿದೆ.
ಇದೊಂದು ವಿಶ್ವಯುದ್ಧದಂತಹ ಪರಿಸ್ಥಿತಿ. ಎಲ್ಲಕ್ಕಿಂತ ಹೆಚ್ಚು ಮುಖ್ಯವಾದದ್ದು ಜೀವರಕ್ಷಣೆಯೇ. ಜೀವನಕ್ಕಿಂತ ಜೀವನಶೈಲಿ ಮುಖ್ಯವಲ್ಲ. ಸರ್ಕಾರ ವಿಧಿಸಿರುವ ನಿಬಂಧನೆಗಳಿಂದ ಜೀವನಶೈಲಿಗೆ ಸ್ವಲ್ಪ ತೊಂದರೆಯಾಗಿರಬಹುದು. ಆದರೆ, ಜೀವರಕ್ಷಣೆಗೆ ಇವು ಅಗತ್ಯ.
ನಾವು ಹೇಗೆ ಸಹಾಯ ಮಾಡಬಹುದು?
ನಮಗೆ ವೈದ್ಯರಿಗಿಂತ ದಾದಿಯರು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗಿದ್ದಾರೆ. ಅದನ್ನು ಬೇರೆ ಯುವಜನರೂ ಮಾಡಬಹುದು. ಹಾಗಾಗಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ನಾವೂ ರೋಗಿಗಳ ಆರೈಕೆಯಲ್ಲಿ ತೊಡಗಬಹುದು.
ಕಷಾಯಗಳನ್ನು ಕುಡಿಯುವುದರಿಂದ, ಆರೋಗ್ಯಕರ ಜೀವನಶೈಲಿಯಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಸೋಂಕಿನಿಂದ ರಕ್ಷಣೆ ಸಿಗುತ್ತದೆ. ಆಸ್ಪತ್ರೆಗೆ ಹೋಗಬೇಕಾದಂತಹ ಪರಿಸ್ಥಿತಿ ನಮಗೆ ಬರದಂತೆ ನೋಡಿಕೊಳ್ಳುವುದು ಈಗಿರುವ ಉಪಾಯ. ಅದು ನಮ್ಮೆಲ್ಲರ ಜವಾಬ್ದಾರಿ.
ಪ್ರತಿದಿನ ಕೇವಲ 30 ನಿಮಿಷ ಸಮಯವನ್ನು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಮೀಸಲಿಟ್ಟರೆ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಸಾಷ್ಟಾಂಗ ನಮಸ್ಕಾರ, ಸಿಂಹಕ್ರಿಯಾ, ಈಶಕ್ರಿಯಾ ಅಭ್ಯಾಸ ಮಾಡುವುದು ಈ ಸಮಯದಲ್ಲಿ ಬಹಳ ಪ್ರಯೋಜನಕಾರಿ.
ಶಿಕ್ಷಣ ಉದ್ಯೋಗಗಳಿಗೆ ತೊಂದರೆಯಾಗಿರುವಾಗ ಮಾನಸಿಕ ಸ್ಥಿರತೆ ಹೇಗೆ ಸಾಧ್ಯ?
ಈ ಯುದ್ಧವನ್ನು ಜಯಿಸುವುದೇ ನಮ್ಮ ಮುಂದಿರುವ ಬಹಳ ದೊಡ್ಡ ಸವಾಲು. ಶಿಕ್ಷಣ, ಉದ್ಯೋಗ, ಜೀವನಶೈಲಿ ಇವೆಲ್ಲವುಗಳು ಇದರಿಂದ ಏರುಪೇರಾಗಿವೆ, ಹೌದು. ಆದರೆ, ಅದನ್ನೆಲ್ಲ ಎದುರಿಸಿ ಗೆಲ್ಲುವುದು ಇಂದಿನ ನಮ್ಮ ಅನಿವಾರ್ಯತೆ. ಅದಕ್ಕಾಗಿ, ಈ ಎಲ್ಲ ತೊಂದರೆಗಳನ್ನು ನಾವೆಲ್ಲ ಸಹಿಸಿಕೊಳ್ಳಲೇಬೇಕು. ಅಷ್ಟೇ ಅಲ್ಲ, ಎಲ್ಲವನ್ನೂ ಸರ್ಕಾರವೇ ಮಾಡಲು ಸಾಧ್ಯವಿಲ್ಲ. ನಾವೂ ಕೈಜೋಡಿಸಬೇಕು. ಕೆಲವು ತಜ್ಞರು ಹೇಳುವ ಪ್ರಕಾರ, ನಾವು ಇದರಿಂದ ಸಂಪೂರ್ಣ ಹೊರಬರಲು ನಾಲ್ಕರಿಂದ ಆರು ವರ್ಷಗಳ ಕಾಲ ಬೇಕಾಗಬಹುದು. ಹೀಗಾದರೆ, ನಮ್ಮ ಜೀವನಶೈಲಿಯೇ 20 ವರ್ಷ ಹಿಂದೆ ಹೋಗಬೇಕಾಗಬಹುದು. ಅಂತಹ ಪರಿಸ್ಥಿತಿಗೆ ನಾವು ಮಾನಸಿಕವಾಗಿ ಸಿದ್ಧರಾಗಿರಬೇಕು. ಜೀವನಶೈಲಿಗಿಂತ ಜೀವನವೇ ಮುಖ್ಯ. ಅಮೆರಿಕಾದಲ್ಲಿ 2020 ರಲ್ಲಿ ಅತಿ ಹೆಚ್ಚು ಆತ್ಮಹತ್ಯೆಗಳು ಸಂಭವಿಸಿವೆ. ಆದ್ದರಿಂದ ನಮ್ಮ ದೈಹಿಕ ಆರೋಗ್ಯದ ಜತೆಗೇ ಮಾನಸಿಕ ಆರೋಗ್ಯವನ್ನೂ ಚೆನ್ನಾಗಿ ಇಟ್ಟುಕೊಳ್ಳಬೇಕಾದ್ದು ಬಹಳ ಮುಖ್ಯ. ಪ್ರಾಣಾಯಾಮ, ಧ್ಯಾನಗಳು ಈ ದಿಕ್ಕಿನಲ್ಲಿ ಖಂಡಿತಾ ನಮಗೆ ಸಹಕಾರಿ.
ವರದಿ: ರಾಧಾಕೃಷ್ಣ ಹೊಳ್ಳ