
ಹರಿಯಾಣ: ಭಾರತೀಯರಿಗೆ ಸೇನೆಗೆ ಸೇರುವುದು ಸಂಬಳಕ್ಕಾಗಿಯೋ ಹೊಟ್ಟೆಪಾಡಿಗಾಗಿಯೋ ಅಲ್ಲ. ಅದು ಅವನ ಜೀವನಧ್ಯೇಯ. ತಾಯಿ ಭಾರತಿಯ ಸೇವೆ ಮಾಡುವ ಅವಕಾಶ.
ಇದು ನಮ್ಮ ದೇಶದ ಸೋಕಾಲ್ಡ್ ಬುದ್ದಿಜೀವಿಗಳಿಗೆ ಯಾವಾಗ ಅರ್ಥವಾಗುವುದೋ ತಿಳಿಯದು.
ಗಂಡ ಹುತಾತ್ಮನಾದ ದಿನವೇ ಸಂಕಲ್ಪ ಕೈಗೊಂಡು, 2 ವರ್ಷ ಕಳೆಯುವುದರಲ್ಲಿ ಅಂದುಕೊಂಡಿದ್ದನ್ನು ಸಾಕಾರಗೊಳಿಸಿದವರು ಹುತಾತ್ಮ ಯೋಧ ವಿಭೂತಿ ಶಂಕರ್ ಅವರ ಪತ್ನಿ ನಿಖಿತಾ ಡೊಂಡಿಯಾಲ.
2019ರ ಫೆಬ್ರುವರಿ 14. ಇಡೀ ದೇಶ ಬೆಚ್ಚಿ ಬೀಳುವಂಥ ಘಟನೆ ಪುಲ್ವಾಮಾದಲ್ಲಿ ನಡೆಯಿತು. ಉಗ್ರರ ಅಟ್ಟಹಾಸಕ್ಕೆ ಭಾರತೀಯ ಯೋಧರು ಅರೆ ಕ್ಷಣದಲ್ಲಿ ಹುತಾತ್ಮರಾಗಿ ಹೋದರು. ಅಂಥ ಒಬ್ಬರು ಹುತಾತ್ಮರ ಪೈಕಿ ಹರಿಯಾಣದ ವಿಭೂತಿ ಶಂಕರ್ ಒಬ್ಬರು.
ಮದುವೆಯಾಗಿ ಇನ್ನೂ ಒಂಬತ್ತು ತಿಂಗಳು ತುಂಬಿರದ ವಿಭೂತಿ ಅವರು ದೇಶಕ್ಕಾಗಿ ಪ್ರಾಣ ಕೊಟ್ಟರು. ಇತ್ತ ಅವರ ಪತ್ನಿ ನಿಖಿತಾ ಡೊಂಡಿಯಾಲ ದಿಕ್ಕು ಕಾಣದೇ ಕೆಂಗೆಟ್ಟುಹೋದರು. ವರ್ಷ ತುಂಬುವುದರೊಳಗೇ ಪತಿಯನ್ನು ಕಳೆದುಕೊಂಡ ನಿಖಿತಾ ಸುಮ್ಮನೇ ಅಳುತ್ತಾ ಕುಳಿತುಕೊಳ್ಳಲಿಲ್ಲ. ಹುತಾತ್ಮ ಪತಿಯ ಶವದ ಎದುರೇ ಅಂದು ಪಣತೊಟ್ಟುಬಿಟ್ಟರು. ನನ್ನ ಈ ಜೀವವನ್ನೂ ದೇಶಕ್ಕಾಗಿಯೇ ಮೀಸಲು ಇಡುವೆ ಎಂದು.
ಆಗಲೇ ಸೇನೆ ಸೇರುವ ಸಿದ್ಧತೆ ನಡೆಸಿದರು ನಿಖಿತಾ. ಇದರ ಫಲವಾಗಿ ಇದೀಗ ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ ಹುದ್ದೆ ಏರುತ್ತಿದ್ದಾರೆ. ಇದೇ 29ರಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಪತಿ ಹುತಾತ್ಮರಾಗಿ ಆರು ತಿಂಗಳಲ್ಲಿಯೇ ನಿಖಿತಾ ಶಾರ್ಟ್ ಸರ್ವೀಸ್ ಕಮಿಷನ್ ಅರ್ಜಿ ಸಲ್ಲಿಸಿದ್ದರು. ಪರೀಕ್ಷೆಗಾಗಿ ಸಕಲ ಸಿದ್ಧತೆ ನಡೆಸಿ ಉತ್ತೀರ್ಣರಾದರು. ನಂತರ ಎಸ್ಎಸ್ಬಿ ಸಂದರ್ಶನದಲ್ಲೂ ತೇರ್ಗಡೆ ಹೊಂದಿದರು. ಇಷ್ಟೇ ಅಲ್ಲದೇ, ಚೆನ್ನೈನಲ್ಲಿ ತರಬೇತಿಯನ್ನೂ ಪಡೆದರು. ಇವೆಲ್ಲಾ ಮುಗಿದು ಇದೀಗ ಲೆಫ್ಟಿನೆಂಟ್ ಹುದ್ದೆ ಅಲಂಕರಿಸಲಿದ್ದಾರೆ.
ಪುಲ್ವಾಮಾ ದಾಳಿಯ ನಂತರ ಹುತಾತ್ಮರಾದ ವಿಭೂತಿ ಶಂಕರ್ ಅವರ ಮೃತದೇಹ ಮನೆ ತಲುಪಿದಾಗ ಅಲ್ಲಿನ ದೃಶ್ಯ ಹೇಗಿತ್ತು ಎಂಬುದನ್ನು ANI ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.