
ಮಂಗಳೂರು: ಹಿಂದು ಧಾರ್ಮಿಕ ದತ್ತಿ ಇಲಾಖೆಯಿಂದ ಮಸೀದಿ ಮದ್ರಸಗಳಿಗೆ ತಸ್ತಿಕ್ ಭತ್ತೆ ನೀಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಿಶ್ವ ಹಿಂದು ಪರಿಷದ್ ವಿರೋಧಿಸುತ್ತದೆ ಎಂದು ವಿಹಿಂಪ ನ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ಅವರು ತಿಳಿಸಿದರು.
ರಾಜ್ಯದಲ್ಲಿ ಕೋವಿಡ್ 19 ಸೋಂಕಿನಿಂದಾಗಿ ಅರ್ಚಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಕಾರಣ ಸರಕಾರದಿಂದ ತಸ್ತಿಕ್ ಭತ್ತೆ ನೀಡಲು ಆದೇಶಿಸಿದನ್ನು ವಿಶ್ವ ಹಿಂದು ಪರಿಷತ್ ಸ್ವಾಗತಿಸುತ್ತದೆ.
ಆದರೆ ಅದೇ ಆದೇಶದ ಪ್ರಕಾರ ತಸ್ತಿಕ್ ಹಣವನ್ನು ಹಿಂದು ಧಾರ್ಮಿಕ ದತ್ತಿ ಇಲಾಖೆಯಿಂದ ದಕ್ಷಿಣಕನ್ನಡ ಜಿಲ್ಲೆಯ 41 ಮಸೀದಿ, ಮದರಸದ ಮೌಲ್ವಿಗಳಿಗೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿರುವುದನ್ನು ವಿಶ್ವ ಹಿಂದು ಪರಿಷದ್ ತೀವ್ರವಾಗಿ ವಿರೋಧಿಸುತ್ತದೆ. ಮತ್ತು ಮದ್ರಸಗಳಿಗೆ ತಸ್ತಿಕ್ ಭತ್ತೆ ನೀಡುವುದನ್ನು ಕೈಬಿಡಬೇಕೆಂದು ಆಗ್ರಹಿಸಿದೆ.
ಹಿಂದುಗಳು ಶ್ರದ್ಧಾಕೇಂದ್ರವಾದ ದೈವಸ್ಥಾನ, ದೇವಸ್ಥಾನದ ಹಣವನ್ನು ಹಿಂದುಗಳಿಗೆ ಮತ್ತು ದೇವಸ್ಥಾನದ ಅಭಿವೃದ್ದಿ ಕಾರ್ಯಗಳಿಗೆ ಮಾತ್ರ ಉಪಯೋಗಿಸಬೇಕು. ವಿನಃ ಮಸೀದಿ, ಮದರಸಗಳಿಗೆ ಉಪಯೋಗಿಸುವುದನ್ನು ವಿಶ್ವ ಹಿಂದು ಪರಿಷದ್ ತೀವ್ರವಾಗಿ ಖಂಡಿಸುತ್ತೇವೆ ಎಂದರು.





