
ಭಾರತದ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಆಚರಣೆಯ ಸಂದರ್ಭದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಯೋಧರಿಗೆ ಯುವ ಬರಹಗಾರರಿಂದ ಗೌರವ ನಮನ ಸಲ್ಲಿಸುವ ಹಾಗೂ ಯುವ ಲೇಖಕರಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಯುವ-ಪ್ರಧಾನಮಂತ್ರಿಗಳ ಕಾರ್ಯಕ್ರಮ’ವನ್ನು ಆಯೋಜಿಸಿದೆ.
ದೇಶದಲ್ಲಿ ಓದುವುದು, ಬರೆಯುವುದು ಮತ್ತು ಪುಸ್ತಕ ಸಂಸ್ಕೃತಿಯನ್ನು ಉತ್ತೇಜಿಸುವುದು ಹಾಗೂ ಭಾರತದ ಬರಹಗಳನ್ನು ಜಾಗತಿಕವಾಗಿ ಜನಪ್ರಿಯಗೊಳಿಸುವ ಉದ್ದೇಶದಿಂದ ಯುವ ಮತ್ತು ಉದಯೋನ್ಮುಖ ಲೇಖಕರಿಗೆ (3೦ ವರ್ಷದೊಳಗಿನವರು) ತರಬೇತಿ ಮತ್ತು ಮಾರ್ಗದರ್ಶನ ನೀಡುವ ಕಾರ್ಯಕ್ರಮ ಇದಾಗಿದೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಯುವ ಬರಹಗಾರರ ಬರವಣಿಗೆಗಳನ್ನು ಉತ್ತೇಜಿಸಬೇಕೆಂಬ ಪ್ರಧಾನಮಂತ್ರಿಗಳ ಕನಸನ್ನು ನನಸು ಮಾಡಲು ಈ ಯುವ (YUVA – Young, Upcoming and Versatile Authors) ಕಾರ್ಯಕ್ರಮವನ್ನು ರೂಪಿಸಲಾಗಿದೆ. ೨೦೨೧ರ ಜನವರಿ ೩೧ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ, ಭಾರತಕ್ಕೆ ಸ್ವಾತಂತ್ರ್ಯದ ೭೫ನೇ ವರ್ಷ ಆಚರಣೆ ವೇಳೆ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅದಕ್ಕೆ ಸಂಬಂಧಿಸಿದ ಘಟನೆಗಳು ಹಾಗೂ ಆಯಾ ಪ್ರದೇಶಗಳಲ್ಲಿನ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿನ ಶೌರ್ಯ ಪ್ರದರ್ಶನಗಾಥೆಗಳ ಕುರಿತು ಯವ ಜನಾಂಗ ತಮ್ಮ ಬರವಣಿಗೆಯ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟದ ನಾಯಕರಿಗೆ ತಮ್ಮ ಅತ್ಯುತ್ತಮ ಕೊಡುಗೆಯನ್ನು ಸಲ್ಲಿಸಬೇಕು ಎಂದು ಕರೆ ನೀಡಿದರು.
ಯುವ ಕಾರ್ಯಕ್ರಮದ ಪ್ರಮುಖಾಂಶಗಳು
2021ರ ಜೂನ್ 1 ರಿಂದ 31ರ ವರೆಗೆ ಅಖಿಲ ಭಾರತ ಸ್ಪರ್ಧೆಗಳನ್ನು https://www.mygov.in/ ವೆಬ್ ಸೈಟ್ ಮೂಲಕ ನಡೆಸಿ ಒಟ್ಟು 75 ಲೇಖಕರನ್ನು ಆಯ್ಕೆ ಮಾಡಲಾಗುವುದು.
………………………………………………………………………………………………….
ವಿಜೇತರನ್ನು ೨೦೨೧ರ ಆಗಸ್ಟ್ ೧೫ರಂದು ಘೋಷಿಸಲಾಗುವುದು.
………………………………………………………………………………………………….
ಯುವ ಲೇಖಕರಿಗೆ ಖ್ಯಾತ ಲೇಖಕರು/ ಮಾರ್ಗದರ್ಶಕರಿಂದ ತರಬೇತಿ ಕೊಡಿಸಲಾಗುವುದು.
………………………………………………………………………………………………….
ಮಾರ್ಗದರ್ಶಕ ಯೋಜನೆಯಡಿ ೨೦೨೧ರ ಡಿಸೆಂಬರ್ ೧೫ರ ವೇಳೆಗೆ ಹಸ್ತಪ್ರತಿಗಳು ಪ್ರಕಟಣೆಗೆ ಸಿದ್ಧವಾಗಲಿವೆ.
………………………………………………………………………………………………….
ಪ್ರಕಟಣೆಗೊಂಡ ಕೃತಿಗಳನ್ನು ರಾಷ್ಟ್ರೀಯ ಯುವ ದಿನದ ಸಂದರ್ಭದಲ್ಲಿ (ಜನವರಿ 12, 2022) ಬಿಡುಗಡೆ ಮಾಡಲಾಗುವುದು.
………………………………………………………………………………………………….
ಮಾರ್ಗದರ್ಶಕ ಯೋಜನೆಯಡಿ ಪ್ರತಿ ಲೇಖಕರಿಗೆ ಆರು ತಿಂಗಳ ಅವಧಿಗೆ ಪ್ರತಿ ತಿಂಗಳು 50,000 ರೂ. ಒಟ್ಟು ವಿದ್ಯಾರ್ಥಿವೇತನವನ್ನು ನೀಡಲಾಗುವುದು.
“ಇದು ಭವಿಷ್ಯದ ಹಾದಿಯನ್ನು ನಿರ್ಧರಿಸುವಂತಹ ಚಿಂತನೆಯುಳ್ಳ ನಾಯಕರ ವರ್ಗವನ್ನು ಸೃಷ್ಟಿಸುವ ಸಿದ್ಧತೆಯೂ ಆಗಿದೆ” ಎಂದು ಪ್ರಧಾನಮಂತ್ರಿ ಹೇಳಿದ್ದರು.
ಯುವ, ಭಾರತ @75 ಯೋಜನೆ (ಸ್ವಾತಂತ್ರ್ಯದ ಅಮೃತ ಮಹೋತ್ಸವ)ಯ ಭಾಗವಾಗಿದ್ದು, ಅಸಾಮಾನ್ಯ ನಾಯಕರು, ಸ್ವಾತಂತ್ರ್ಯ ಹೋರಾಟ ಗಾರರು ಗುರುತಿಸಲಾಗದಂತಹ ಮತ್ತು ಮರೆತು ಹೋಗಿರುವಂತಹ ಸ್ಥಳಗಳು ಮತ್ತು ರಾಷ್ಟ್ರೀಯ ಚಳವಳಿಗಳಲ್ಲಿ ಅವುಗಳ ಪಾತ್ರ ಮತ್ತು ಇತರೆ ವಿಷಯಗಳನ್ನು ಮುನ್ನೆಲೆಗೆ ತರಲು ವಿನೂತನ ಹಾಗೂ ಕ್ರಿಯಾಶೀಲ ಯುವ ತಲೆಮಾರಿನ ಲೇಖಕರ ದೃಷ್ಟಿಕೋನಗಳನ್ನು ಹಂಚಿಕೊಳ್ಳುವ ಉದ್ದೇಶವಿದೆ. ಅಲ್ಲದೆ ಈ ಯೋಜನೆ ಭಾರತೀಯ ಪರಂಪರೆ ಸಂಸ್ಕೃತಿ ಮತ್ತು ಜ್ಞಾನ ವ್ಯವಸ್ಥೆಯ ಉತ್ತೇಜನಕ್ಕೆ ವೈವಿಧ್ಯಮಯ ವಿಷಯಗಳ ಕುರಿತು ಬರಹಗಾರರು ನಾನಾ ಆಯಾಮಗಳನ್ನು ಅಭಿವ್ಯಕ್ತಗೊಳಿಸಲು ನೆರವಾಗಲಿದೆ.
ಶಿಕ್ಷಣ ಸಚಿವಾಲಯದಡಿ ಬರುವ ಭಾರತದ ನ್ಯಾಷನಲ್ ಬುಕ್ ಟ್ರಸ್ಟ್ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಸ್ಥೆಯಾಗಿದ್ದು, ಮೊದಲೇ ನಿಗದಿಪಡಿಸಿರುವ ಹಂತಗಳಲ್ಲಿ ಮಾರ್ಗದರ್ಶನ ನೀಡುವ ಈ ಯೋಜನೆಯನ್ನು ಹಂತ ಹಂತವಾರು ಜಾರಿಗೊಳಿಸಲಾಗುವುದು. ಈ ಯೋಜನೆಯಡಿ ಸಿದ್ಧಪಡಿಸಿರುವ ಪುಸ್ತಕಗಳನ್ನು ಭಾರತದ ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಲಿದೆ ಮತ್ತು ಅವುಗಳನ್ನು ಇತರೆ ಭಾರತೀಯ ಭಾಷೆಗಳಿಗೂ ಅನುವಾದಿಸುವ ಮೂಲಕ ‘ಏಕ ಭಾರತ್ ಶ್ರೇಷ್ಠ ಭಾರತ್” ಉತ್ತೇಜನಕ್ಕೆ ಸಂಸ್ಕೃತಿ ಮತ್ತು ಸಾಹಿತ್ಯ ವಿನಿಮಯವನ್ನು ಖಾತ್ರಿ ಪಡಿಸಲಾಗುವುದು.
ಆಯ್ದ ಯುವ ಲೇಖಕರಿಗೆ ಜಗತ್ತಿನ ಅತ್ಯುತ್ತಮ ಲೇಖಕರೊಡನೆ ಸಂವಾದ ನಡೆಸಲು ಮತ್ತು ಸಾಹಿತ್ಯ ಉತ್ಸವ ಮತ್ತಿತರವುಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರಲ್ಲಿ ಯುವ ಮನಸ್ಸುಗಳ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಮತ್ತು ಭವಿಷ್ಯದ ಜಗತ್ತಿನಲ್ಲಿ ನಾಯಕತ್ವವನ್ನು ವಹಿಸುವಂತಹ ಯುವ ಓದುಗರು / ಕಲಿಕಾರ್ಥಿಗಳನ್ನು ಸಿದ್ಧಪಡಿಸುವಂತಹ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಲಿದೆ. ಈ ನಿಟ್ಟಿನಲ್ಲಿ ಯುವ, ಸೃಜನಾತ್ಮಕ ಜಗತ್ತಿನಲ್ಲಿ ಭವಿಷ್ಯದ ನಾಯಕರನ್ನು ರೂಪಿಸಲು ದೀರ್ಘಾವಧಿಯಲ್ಲಿ ಭದ್ರ ಬುನಾದಿ ಯನ್ನು ಹಾಕಲಿದೆ.