
ದೆಹಲಿ: ನಮ್ಮ ನಡುವೆ ಇರುವ ಅಸಾಮಾನ್ಯ ಸಾಧಕರನ್ನು ದೇಶದ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಲ್ಲಿ ಮನವಿ ಮಾಡಿದ್ಧಾರೆ.
ಭಾರತವು ಅನೇಕ ಪ್ರತಿಭಾವಂತ ವ್ಯಕ್ತಿಗಳನ್ನು ಹೊಂದಿದೆ. ಅವರು ಅಸಾಧಾರಣ ಕೆಲಸವನ್ನು ಮಾಡುತ್ತಿದ್ದಾರೆ. ಅವುಗಳಲ್ಲಿ ಹೆಚ್ಚಿನವುಗಳು ಹೊರಜಗತ್ತಿಗೆ ಅಥವಾ ದೆಹಲಿಯ ವರೆಗೆ ತಲಪುವುದಿಲ್ಲ. ಅಂತಹ ಸ್ಪೂರ್ತಿದಾಯಕ ಅಸಾಮಾನ್ಯ ಸಾಧಕರು ನಿಮಗೆ ತಿಳಿದಿದ್ದಾರೆ? ನೀವು ಅವರನ್ನು #PeoplesPadma ಹ್ಯಾಶ್ ಟ್ಯಾಗ್ ಬಳಸಿ ನಾಮನಿರ್ದೇಶನ ಮಾಡಬಹುದು. ಸೆಪ್ಟೆಂಬರ್ 15 ರವರೆಗೆ ನಾಮನಿರ್ದೇಶನ ತೆರೆದಿರುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಜನವರಿಯಲ್ಲಿ ವರ್ಷದ ತನ್ನ ಮೊದಲ ‘ಮನ್ ಕಿ ಬಾತ್’ ಭಾಷಣದಲ್ಲಿ ಪಿಎಂ ಮೋದಿ ನಿಸ್ವಾರ್ಥವಾಗಿ ಕೆಲಸ ಮಾಡುವ ಎಲೆಮರೆಯ ಪ್ರತಿಭೆಗಳ ಬಗ್ಗೆ ತಿಳಿದುಕೊಳ್ಳಿ ಎಂದು ದೇಶದ ಜನರನ್ನು ಒತ್ತಾಯಿಸಿದ್ದರು.
ಜನರು ನಾಮ ನಿರ್ದೇಶನ ಮಾಡುವುದಕ್ಕಾಗಿ ಪದ್ಮ ಅವಾರ್ಡ್ಸ್ ವೆಬ್‌ಸೈಟ್‌ನ ಲಿಂಕ್ ಅನ್ನು ಸಹ ಅವರು ಪೋಸ್ಟ್ ಮಾಡಿದ್ದಾರೆ. ಪದ್ಮ ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಅಥವಾ ಶಿಫಾರಸುಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಸ್ವೀಕರಿಸಲಾಗುವುದು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ನಾಮನಿರ್ದೇಶನ ಮಾಡಬಯಸುವವರು ಈ ಲಿಂಕ್ ಮೂಲಕ ಸಾಧಕರ ಹೆಸರನ್ನು ಸೂಚಿಸಬಹುದು: https://padmaawards.gov.in.
ಅರ್ಜಿಯನ್ನು ಯಾವ ರೂಪದಲ್ಲಿ ನೀಡಬೇಕೆಂದು ಸರ್ಕಾರ ಸೂಚಿಸಿದೆ. ನಾಮನಿರ್ದೇಶನ ಮಾಡುವ ಜನರು ನಿರೂಪಣಾ ರೂಪದಲ್ಲಿ ಉಲ್ಲೇಖವನ್ನು ಪೋಸ್ಟ್ ಮಾಡಬೇಕು. ಶಿಫಾರಸು ಮಾಡಿದ ವ್ಯಕ್ತಿಯ ಸಾಧನೆಗಳು / ಸೇವೆಯನ್ನು ಉಲ್ಲೇಖಿಸರುವ ಬರಹದ ನಿಗದಿತ ಪದ ಮಿತಿಯ 800 ಪದಗಳ ಒಳಗೆ ಇರಬೇಕು.

ಪದ್ಮ ಪ್ರಶಸ್ತಿಗಳು – ಪದ್ಮವಿಭೂಷಣ್, ಪದ್ಮಭೂಷಣ್ ಮತ್ತು ಪದ್ಮಶ್ರೀ – ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಸೇರಿವೆ. ಈ ಪ್ರಶಸ್ತಿಗಳನ್ನು 1954 ರಲ್ಲಿ ಸ್ಥಾಪಿಸಲಾಯಿತು, ಮತ್ತು ಪ್ರತಿವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ. ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ಔಷಧ, ಸಾಮಾಜಿಕ ಕಾರ್ಯ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ವ್ಯಾಪಾರ ಮತ್ತು ಉದ್ಯಮ,ನಾಗರಿಕ ಸೇವೆಯಂತಹ ದೇಶದ ಗರಿಮೆ ಹೆಚ್ಚಿಸುವ ಎಲ್ಲಾ ಕ್ಷೇತ್ರಗಳಲ್ಲಿ / ವಿಭಾಗಗಳಲ್ಲಿ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು / ಸೇವೆಗಾಗಿ ನೀಡಲಾಗುತ್ತದೆ.