Quantcast
Channel: News – Vishwa Samvada Kendra
Viewing all articles
Browse latest Browse all 1745

‘ಸ್ವರ ಸಮರ್ಪಣ’ಒಂದು ವಿಶೇಷ, ವಿನೂತನ, ವಿಭಿನ್ನ, ಘೋಷ್ ಪ್ರದರ್ಶನ

$
0
0

ಶಿವಮೊಗ್ಗ : ಜಿಲ್ಲೆಯ ಹೊಸಹಳ್ಳಿ ಗ್ರಾಮದಲ್ಲಿ 27/12/2020, ಭಾನುವಾರ ಸಂಜೆ 5.00 ಘಂಟೆಗೆ, ಹೊಸಹಳ್ಳಿ ಹಾಗೂ ಮತ್ತೂರು ಶಾಖೆಗಳ ಘೋಷ್ ವಾರ್ಷಿಕೋತ್ಸವ ‘ಸ್ವರ ಸಮರ್ಪಣ’ ನಡೆಯಿತು. ಅಖಿಲ ಭಾರತೀಯ ಸಹ ಶಾರೀರಿಕ ಪ್ರಮುಖರಾದ ಶ್ರೀ ಜಗದೀಶ್ ಪ್ರಸಾದ್ ರವರ ಸಮ್ಮುಖದಲ್ಲಿ 6 ರೀತಿಯ ಘೋಷ್ ಪ್ರದರ್ಶನ ನಡೆಯಿತು. ಪ್ರಖ್ಯಾತ ವಯೊಲಿನ್ ವಾದಕರಾದ ಶ್ರೀ ಹೊಸಹಳ್ಳಿ ಕೆ. ವೆಂಕಟರಾಮ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮೊದಲನೆಯದು,  ಘೋಷ್ ವಾದನ ಮಾಡುತ್ತಾ ವಜ್ರಾಕೃತಿ, ತ್ರಿಭುಜ, ಸಂಕಲನ ಚಿಹ್ನೆ, ಸ್ವಸ್ತಿಕ್, ವೃತ್ತ ಮೊದಲಾದ ವಿವಿಧ ರೀತಿಯ ವ್ಯೂಹ ರಚನೆ ಮಾಡುವ ಪ್ರದರ್ಶನ, ಎರಡನೇಯದು ವಯೊಲಿನ್, ಮೃದಂಗ, ಆನಕ, ಪಣವ ಮೊದಲಾದ  ವಿವಿಧ ವಾದ್ಯಗಳನ್ನು ಸಂಯೋಜಿಸಿ ಪ್ರದರ್ಶಿಸಿದ ವಾದ್ಯ ಸಮ್ಮೇಳನ, ಮೂರನೇಯದಾಗಿ, ಸಂಘದ ಇತಿಹಾಸದಲ್ಲಿ ಮೊದಲ ಬಾರಿಗೆ ಎನ್ನಬಹುದಾದ ಗಣ ಸಮತಾ ಜೊತೆ ಘೋಷ್ ವಾದನ ಮತ್ತು ಅದರಲ್ಲಿ ವಿಶೇಷವಾಗಿ ಕ್ಲಿಷ್ಟಕರವಾದ ಕ್ಷಿಪ್ರಚಲ, ಮಂದಚಲ ಮತ್ತು ಪ್ರತಿಚಲದಲ್ಲಿ ಚತುರ್ವ್ಯೂಹ, ತತಿವ್ಯೂಹ ಕ್ರಿಯೆಗಳು, ನಾಲ್ಕನೇಯದು ತಾಳವಾದ್ಯ ಪ್ರದರ್ಶನ, ಐದನೇಯದು ವಿಭಿನ್ನ ರೀತಿಯ ವಿಶೇಷ ಪ್ರಯೋಗವಾದ ಗಣರಾಜ್ಯೋತ್ಸವದ ಮೂರನೆಯ ದಿನ ಸೈನ್ಯದವರು ತೋರಿಸುವ ಬೀಟಿಂಗ್ ದಿ ರಿಟ್ರೀಟ್ ಕಲ್ಪನೆಯ ಪ್ರದರ್ಶನ ಹಾಗೂ ಕೊನೆಯಲ್ಲಿ ಸ್ಥಿರ ವಾದನದ ಪ್ರದರ್ಶನ.

ಹೀಗೆ ಒಟ್ಟು ಸುಮಾರು 60 ನಿಮಿಷಗಳ  ಘೋಷ್ ಪ್ರದರ್ಶನ, ಗ್ರಾಮಾಂತರ ಶಾಖೆಯಿಂದ ನಡೆದದ್ದು ಅಭಿನಂದನಾರ್ಹ, ಅನುಕರಣೀಯ ಪ್ರಯತ್ನ. ಇದಕ್ಕಾಗಿ ಒಟ್ಟು ಸುಮಾರು 40 ಜನ ಘೋಷ್ ವಾದಕರು 30 ದಿನಗಳು ಬೆಳಗ್ಗೆ ಮತ್ತು ರಾತ್ರಿ ನಿರಂತರ ಅಭ್ಯಾಸ ನಡೆಸಿದ್ದರು. ಒಟ್ಟು ಪ್ರದರ್ಶನದಲ್ಲಿ 33 ಸ್ವಯಂಸೇವಕರು ಭಾಗವಹಿಸಿದ್ದರು. ಮಾತೆಯರೂ ಸೇರಿದಂತೆ ಸುಮಾರು 300 ಜನ ಸಾರ್ವಜನಿಕರು ಪ್ರಾರಂಭದಿಂದಲೇ ಇದ್ದು ಕಾರ್ಯಕ್ರಮ ವೀಕ್ಷಿಸಿದ್ದು ಕಾರ್ಯಕರ್ತರ ಉತ್ಸಾಹ ವೃದ್ಧಿಸಿತು. ಸಂಘಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದರು.

ನಂತರ ಶ್ರೀ ಜಗದೀಶ್ ಪ್ರಸಾದ್ ರವರು ಬೌದ್ಧಿಕ್ ನಡೆಸಿಕೊಟ್ಟರು. ಶ್ರೀ ವೆಂಕಟರಾಮ್ ಅವರು ಸ್ವತಃ ಸಂಗೀತ ವಿದ್ವಾಂಸರಾಗಿರುವುದರಿಂದ ಒಟ್ಟು ಪ್ರದರ್ಶನವನ್ನು ಕೂಲಂಕಷವಾಗಿ ಗಮನಿಸಿ, ಸ್ವಯಂಸೇವಕರ ಪ್ರದರ್ಶನವನ್ನು ಮತ್ತು ಅದೇ ಗ್ರಾಮದವರೂ ಆಗಿರುವುದರಿಂದ ಪ್ರತಿನಿತ್ಯ ತಯಾರಿ ಮಾಡುತ್ತಿದ್ದುದ್ದನ್ನೂ ನೋಡಿದ್ದಿದ್ದರಿಂದ ಸ್ವಯಂಸೇವಕರ ಸತತ ಪ್ರಯತ್ನವನ್ನು ಹಾಗೂ ಶ್ರದ್ಧೆ ಮತ್ತು ಬದ್ಧತೆಗಳನ್ನು ಮುಕ್ತವಾಗಿ ಶ್ಲಾಘಿಸಿದರು.

 ವೇದಿಕೆಯ ಮೇಲೆ ಜಿಲ್ಲಾ ಸಂಘಚಾಲಕರಾದ ಶ್ರೀ ವೆಂಕಟೇಶ ಸಾಗರ್ ಇದ್ದರು. ಕಾರ್ಯಕ್ರಮದಲ್ಲಿ ಪ್ರಾಂತ ಸಹ ಕಾರ್ಯವಾಹರಾದ ಶ್ರೀ ಪಟ್ಟಾಭಿರಾಮ, ಪ್ರಾಂತ ಪ್ರಚಾರಕರಾದ ಶ್ರೀ ಗುರುಪ್ರಸಾದ್, ಮೊದಲಾದ ಸಂಘದ ಹಿರಿಯರು, ಸಚಿವರಾದ ಶ್ರೀ ಕೆಎಸ್ ಈಶ್ವರಪ್ಪನವರು ಹಾಗೂ ಸಂಸದರಾದ ಶ್ರೀ ಬಿವೈ ರಾಘವೇಂದ್ರ ಉಪಸ್ಥಿತರಿದ್ದರು.

ಒಟ್ಟಿನಲ್ಲಿ, ಅಂದು ಒಂದು ವಿಶೇಷ, ವಿನೂತನ, ವಿಭಿನ್ನ, ಕೇವಲ ಘೋಷ್ ಪ್ರದರ್ಶನದ ಶಾಖಾ ವಾರ್ಷಿಕೋತ್ಸವಕ್ಕೆ ಹೊಸಹಳ್ಳಿ ಜನತೆ ಸಾಕ್ಷಿಯಾಯಿತು.

The post ‘ಸ್ವರ ಸಮರ್ಪಣ’ ಒಂದು ವಿಶೇಷ, ವಿನೂತನ, ವಿಭಿನ್ನ, ಘೋಷ್ ಪ್ರದರ್ಶನ first appeared on Vishwa Samvada Kendra.

Viewing all articles
Browse latest Browse all 1745

Trending Articles