
ಲಷ್ಖರ್-ಇ- ತೋಯ್ಬಾ, ಜೈಶ್-ಎ-ಮೊಹಮ್ಮದ್ ಸೇರಿದಂತೆ 42 ಭಯೋತ್ಪಾದಕ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.
ಮಂಗಳವಾರ (ಮಾರ್ಚ್ 9ರಂದು) ಲೋಕಸಭೆಗೆ ಮಾಹಿತಿ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ ಅವರು ಲಷ್ಖರ್-ಇ- ತೋಯ್ಬಾ, ಜೈಶ್-ಎ-ಮೊಹಮ್ಮದ್ ಸೇರಿದಂತೆ ಭಯೋತ್ಪಾಕ ಚಟುವಟಿಕೆಯಲ್ಲಿ ಭಾಗಿಯಾದ 42 ಭಯೋತ್ಪಾದಕ ಸಂಘಟನೆಗಳನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, 1967 ಅಡಿಯಲ್ಲಿ ನಿಷೇಧಿಸಲಾಗಿದೆ ಎಂದರು.
ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ 2018ರಿಂದ 2020ರ ಅವಧಿಯಲ್ಲಿ ಒಟ್ಟು 635 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ 115 ಅಮಾಯಕ ನಾಗರಿಕರು ಬಲಿಯಾಗಿದ್ದಾರೆ.
370ನೇ ವಿಧಿಯ ರದ್ಧತಿಯ ನಂತರ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಪ್ರಮಾಣ ಬಾರೀ ಪ್ರಮಾಣದಲ್ಲಿ ಕಡಮೆಯಾಗಿದೆ. 2019ರಲ್ಲಿ 594, 2020ರಲ್ಲಿ 244 ಮತ್ತು 2021ರ ಫೆಬ್ರುವರಿ ತನಕ 15 ಪ್ರಕರಣಗಳು ನಡೆದಿವೆ. ಜೊತೆಗೆ ಜಮ್ಮು-ಕಾಶ್ಮೀರದಲ್ಲಿ 2019ರಲ್ಲಿ 157 ಭಯೋತ್ಪಾದಕರನ್ನು, 2020ರಲ್ಲಿ 221 ಮತ್ತು 2021ರ ಫೆಬ್ರುವರಿ ತನಕ 8 ಭಯೋತ್ಪಾದರನ್ನು ಹತ್ಯೆ ಮಾಡಲಾಗಿದೆ ಎಂದು ಗೃಹ ಇಲಾಖೆಯು ಲೋಕಸಭೆಯಲ್ಲಿ ತಿಳಿಸಿದೆ
ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ತಾನಂದ ರೈ ಅವರು ಕಳೆದ 2 ವರ್ಷಗಳಲ್ಲಿ ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ 61 ಒಳನುಸುಳುವಿಕೆಯ ಪ್ರಕರಣಗಳು ದಾಖಲಾಗಿದೆ. ಬಾರತ-ಬಾಂಗ್ಲಾದೇಶ ಗಡಿಭಾಗದಲ್ಲಿ 1045 ಮತ್ತು ನೇಪಾಳ ಗಡಿಯಲ್ಲಿ 63 ಒಳನುಸುಳುವ ಪ್ರಕರಣಗಳು ದಾಖಲಾಗಿವೆ ಎಂದಿದ್ದಾರೆ.
