Clik here to view.

ಲಡಾಕ್: ಅತೀ ತೀವ್ರ ಶೀತದ ಪ್ರದೇಶದಲ್ಲಿ ಬೆಚ್ಚಗಿರಲು ಬಳಸಬಹುದಾದ ಸೌರಶಕ್ತ ಆಧಾರಿತ ಟೆಂಟ್‌ನ್ನು ಲಢಾಕಿನ ಸಂಶೋಧಕ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್‌ಚುಕ್ ಆವಿಷ್ಕರಿಸಿದ್ದಾರೆ.
ಸಿಯಾಚಿನ್, ಗಲ್ವಾನ್ ಹಾಗೂ ಲಡಾಖ್‌ನ ಅತೀ ಶೀತ ಗಡಿಗಳಲ್ಲಿಸೇವೆ ಸಲ್ಲಿಸುತ್ತಿರುವ ಭಾರತೀಯ ಸೈನಿಕರಿಗೆ ಈ ಟೆಂಟ್ ಗಳು ನೆರವಾಗುತ್ತವೆ. ಈ ಟೆಂಟ್ ನ ಆವಿಷ್ಕರ್ತ ತಮ್ಮ ಆವಿಷ್ಕಾರಗಳಿಂದಲೇ ದೇಶ-ವಿದೇಶಗಳಲ್ಲಿ ಭಾರೀ ಖ್ಯಾತಿಗಳಿಸಿರುವ ಮ್ಯಾಗ್ಸೆಸ್ ಪ್ರಶಸ್ತಿ ಪುರಸ್ಕೃತ ಸೋನಮ್ ವಾಂಗ್‌ಚುಕ್. ನಟ ಅಮಿರ್ ಖಾನ್ 3 ಈಡಿಯಟ್ಸ್ ಚಿತ್ರದಲ್ಲಿ ನಟಿಸಿರುವ ಪುನ್ಸುಕ್ ವಾಂಗ್ಡು ಪಾತ್ರದ ಪ್ರೇರಕ ವ್ಯಕ್ತಿ ಇವರೇ.
ಹೊರಗಡೆ ವಾತಾವರಣದಲ್ಲಿ -೧೪ ಡಿಗ್ರಿ ಸೆಂಟಿಗ್ರೇಡ್ ಇರುವ ಮಧ್ಯರಾತ್ರಿಯ ವೇಳೆಯಲ್ಲಿಯೂ ಟೆಂಟ್ ಒಳಗೆ +೧೫ಡಿಗ್ರಿ ಸೆಂಟಿಗ್ರೇಡ್ ತಾಪಮಾನ ನೆಲೆಸುವಂತೆ ಈ ಟೆಂಟ್ ನಿರ್ಮಾಣ ಮಾಡಿದ್ದಾರೆ. ಎಲ್ಲಿ ಬೇಕೆಂದ ಕಡೆ ಎತ್ತಿ ಕೊಂಡೊಯ್ದು ಸುಲಭವಾಗಿ ನಿರ್ಮಿಸಬಲ್ಲ ಈ ಟೆಂಟ್‌ಗಳು ಸಿಯಾಚಿನ್ ಮೊದಲಾದ ಕಠಿಣ ಪ್ರದೇಶಗಳಲ್ಲಿ ರಕ್ಷಣಾ ಸೇವೆಯಲ್ಲಿ ನಿಯುಕ್ತರಾಗುವ ಸೈನಿಕರಿಗೆ ಒಂದು ವರದಾನವಾಗಬಲ್ಲದು. ಇದು ಒಟ್ಟು ನಾಲ್ಕು ಪದರಗಳನ್ನು ಹೊಂದಿದೆ. ಇಷ್ಟೇ ಅಲ್ಲದೇ ಈ ಟೆಂಟ್‌ಗಳ ತಾಪಮಾನವನ್ನು ಸೈನಿಕರು ತಮ್ಮ ಅಗತ್ಯಗಳಿಗೆ ತಕ್ಕಂತೆ ಬದಲಾಯಿಸಿಕೊಳ್ಳಬಹುದಾಗಿದೆ.
Clik here to view.

ಮಿಲಿಟರಿ ಟೆಂಟ್‌ಗಳಲ್ಲಿ ಶಾಖವನ್ನು ಉತ್ಪಾದಿಸಲು ಬಳಸುವ ಇಂಧನದ ಬಳಕೆಯನ್ನು ಸಂಪೂರ್ಣವಾಗಿ ತಗ್ಗಿಸುವುದಲ್ಲದೇ ಪರಿಸರ ರಕ್ಷಣೆಗೆ ಈ ಸೋಲಾರ್ ಹೀಟ್ ಟೆಂಟ್‌ಗಳು ಸಹಕಾರಿ ಎಂದು ಸೋನಮ್ ವಾಂಗ್ಚುಕ್ ತಿಳಿಸಿದ್ದಾರೆ.
ಬೆಳಗಿನ ಸಮಯ ಸೂರ್ಯನಿಂದ ದೊರೆಯುವ ಶಾಖವನ್ನು ಶೇಖರಿಸಿಟ್ಟುಕೊಳ್ಳುವ ಈ ಸೋಲಾರ್ ಹೀಟ್ ಟೆಂಟ್‌ಗಳು ರಾತ್ರಿ ಸಮಯದಲ್ಲಿ ಸೈನಿಕರ ಮಲಗುವ ಕೋಣೆಯನ್ನು ಬೆಚ್ಚಗಾಗಿಸುತ್ತದೆ. ಒಂದು ಟೆಂಟ್‌ನಲ್ಲಿ ಸುಮಾರು 10 ಸೇನಾ ಯೋಧರು ಇರಬಹುದಾಗಿದ್ದು, ಸೇನೆಯ ಅಗತ್ಯಗಳಿಗೆ ತಕ್ಕಂತೆ ಈ ಸೋಲಾರ್ ಹೀಟ್ ಟೆಂಟ್‌ಗಳನ್ನು ನಿರ್ಮಿಸಲಾಗಿದೆ ಎಂದಿದ್ದಾರೆ.
ಈ ಸೋಲಾರ್ ಹೀಟ್ ಟೆಂಟ್‌ಗಳು ಇಂಧನದ ಬಳಕೆ ಇಲ್ಲವಾಗುರುವುದರಿಂದ ಪರಿಸರ ಸ್ನೇಹಿಯೂ ಆಗಿವೆ. ಅಲ್ಲದೇ ಕಡಿಮೆ ವೆಚ್ಚದಲ್ಲಿ ದೀರ್ಘಕಾಲ ಸೇವೆ ಒದಗಿಸಲಿದೆ ಎಂಬುದು ವಾಂಗ್ಚುಕ್ ಅವರ ಭರವಸೆ.
ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯ ಬಳಿಕ, ವಾಂಗ್ಚುಕ್ ಈ ಸೋಲಾರ್ ಹೀಟ್ ಟೆಂಟ್‌ಗಳನ್ನು ನಿರ್ಮಾಣ ಮಾಡುವ ಘೋಷಣೆ ಮಾಡಿದ್ದರು. ಅದರಂತೆ ಇದೀಗ ಈ ಪರಿಸರ ಸ್ನೇಹಿ ಸೋಲಾರ್ ಹೀಟ್ ಟೆಂಟ್‌ಗಳು ಸಿದ್ಧವಾಗಿವೆ.
Clik here to view.

ಆವಿಷ್ಕಾರಗಳ ಹರಿಕಾರ:
ಸೋನಮ್ ಏಷ್ಯಾದ ನೋಬೆಲ್ ಎಂದೇ ಬಿಂಬಿತವಾಗಿರುವ ಮ್ಯಾಗ್ಸೆಸೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಲಡಾಕಿ ಯುವಕರ ಜೀವನ ಅವಕಾಶಗಳನ್ನು ಸುಧಾರಿಸಿ, ಎಲ್ಲ ಕ್ಷೇತ್ರಗಳಲ್ಲಿ ಸ್ಥಳೀಯ ಸಮುದಾಯವನ್ನು ರಚನಾತ್ಮಕವಾಗಿ ತೊಡಗಿಸಿ, ಅಲ್ಲಿನ ಸಂಸ್ಕೃತಿ ಮತ್ತು ಆರ್ಥಿಕ ಪ್ರಗತಿಗೆ ಶ್ರಮಿಸಿದ್ದಾರೆ. ಅಲ್ಲದೆ, ಗ್ರಾಮೀಣ ಮಟ್ಟದಲ್ಲಿ ಹಲವಾರು ಬದಲಾವಣೆ ತರುವ ಪ್ರಯತ್ನ ಮಾಡಿದ್ದ ವಾಂಗ್ಚುಕ್ ಜಾಗತಿಕ ಮಟ್ಟದಲ್ಲಿ ಹಲವರಿಗೆ ಮಾದರಿಯಾಗಿದ್ದಾರೆ. ಉತ್ತರ ಭಾರತದ ಲಡಾಕ್ ನಲ್ಲಿ ವ್ಯವಸ್ಥಿತ, ಸಹಕಾರ ಮತ್ತು ಸಮುದಾಯದ ಕಲಿಕೆಗೆ ಸಾಕಷ್ಟು ಶ್ರಮಿಸಿದ್ದಾರೆ. ಜೊತೆಗೆ ಭಾರತ ಸರ್ಕಾರ ಚೀನೀ ಆಪ್ ಗಳನ್ನು ನಿಷೇಧಿಸುವ ಬಹಳ ದಿನಗಳ ಹಿಂದೆಯೇ ‘ಬಾಯ್ಕಾಟ್ ಚೀನಾ’ ಆಂದೋಲನ ಆರಂಭಿಸಿ, ಚೀನಾ ಸರಕುಗಳನ್ನು ತಿರಸ್ಕರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಚೀನೀ ಸರಕಾರವು ಕೆಲವು ಆ್ಯಪ್ ಗಳ ಮೂಲಕ ವಿವಿಧ ರಾಷ್ಟ್ರಗಳ ಜನರ ವೈಯಕ್ತಿಕ ವಿಷಯಗಳನ್ನು ಸಂಗ್ರಹಿಸಲು ಬಳಸುತ್ತಿದೆ. ಹೀಗಾಗಿ ಈ ಆಪ್‌ಗಳನ್ನು ನಿಷೇಧಿಸುವುದೇ ಒಳ್ಳೆಯದು ಎಂದಿದ್ದಾರೆ. ಲಢಾಕಿನ ಜಲಕ್ಷಾಮವನ್ನು ಪರಿಹರಿಸುವ ಮಂಜುಗಡ್ಡೆ ಸ್ತೂಪ, ಸೌರಶಕ್ತಿ ಚಾಲಿತ ಗುಡಿಸಲು ಮೊದಲಾದ ಹಲವು ಹತ್ತು ಜನೋಪಯೋಗಿ ಆವಿಷ್ಕಾರಗಳ ಹರಿಕಾರ, ಈ ಸೋನಮ್ ವಾಂಗಚುಕ್.