
ಭಾರತದ ಕೊರೋನಾ ಲಸಿಕೆಗೆ ಇಡೀ ವಿಶ್ವಕ್ಕೆ ಸಂಜೀವಿನಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಕೊರೋನಾದ ಈ ಸಂಕಟದ ಸಮಯದಲ್ಲಿ ವ್ಯಾಕ್ಸಿನ್ ಮೈತ್ರಿ (#VaccineMaitri) ಹೆಸರಿನಲ್ಲಿ ಜಗತ್ತಿಗೆ ನೆರವಾಗುತ್ತಿರುವ ಭಾರತ, ಇದೀಗ ನೆರೆಯ ಪಾಕಿಸ್ತಾನಕ್ಕೂ ಕೊರೋನಾ ಲಸಿಕೆ ರವಾನಿಸಲಿದೆ.
ಇದು ಭಾರತ-ಪಾಕಿಸ್ತಾನ ಎರಡು ದೇಶಗಳ ನಡುವಿನ ನೇರ ಖರೀದಿ- ಪೂರೈಕೆ ಪ್ರಕ್ರಿಯೆ ಅಲ್ಲವಾದರೂ, ಭಾರತ ಜಗತ್ತಿನ ಬಡ ದೇಶಗಳಿಗೆ ಆದ್ಯತೆಯ ಮೇರೆಗೆ ಉಚಿತ ಲಸಿಕೆ ನೀಡುವ ಬದ್ದತೆಯನ್ನು ಶತ್ರು ದೇಶವೆಂದು ಬದಲಿಸಿಲ್ಲ ಎನ್ನುವುದು ಗಮನಾರ್ಹ.
ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ ಬಡ ದೇಶಗಳಿಗೆ ಆದ್ಯತೆಯ ಮೇಲೆ ಮೇಲೆ ಲಸಿಕೆ ಪೂರೈಸುವ ಸಲುವಾಗಿ ಜಾಗತಿಕ ಮಟ್ಟದಲ್ಲಿ ‘ಗವಿ’ (ಗ್ಲೋಬಲ್ ಅಲಯನ್ಸ್ ಫಾರ್ ವ್ಯಾಕ್ಸಿನೇಷನ್ ಆ್ಯಂಡ್ ಇಮ್ಯುನೈಜೇಷನ್) ಎಂಬ ಒಕ್ಕೂಟವನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ ಭಾರತ 4.5 ಕೋಟಿ ಡೋಸ್‌ನಷ್ಟು ಲಸಿಕೆಯನ್ನು ಪಾಕಿಸ್ತಾನಕ್ಕೆ ಪೂರೈಸಲಿದೆ.

‘ಕೃಣ್ವಂತೋ ವಿಶ್ವಮಾರ್ಯಂ’, ವೈಸುಧೈವ ಕುಟುಂಬಕಂ’ ಎಂಬ ಭಾರತೀಯ ಚಿಂತನೆಯಂತೆ ಭಾರತ ಸರ್ಕಾರವು ‘ಮೇಡ್ ಇನ್ ಇಂಡಿಯಾ’ ಕೊರೋನಾ ಲಸಿಕೆಯನ್ನು ಈಗಾಗಲೇ 31 ದೇಶಗಳಿಗೆ 7 ಮಿಲಿಯನ್ ಡೋಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗಿದೆ.
ಪಾಕಿಸ್ತಾನವು ಯಾವುದೆ ದೇಶದಿಂದ ಲಸಿಕೆ ಖರೀದಿಸುತ್ತಿಲ್ಲ; ಬದಲಾಗಿ ಕೇವಲ ದಾನವಾಗಿ ಬಂದ ಲಸಿಕೆಯನ್ನು ಮಾತ್ರವೇ ಬಳಸುತ್ತಿದೆ. ಇದಕ್ಕೆ ಪಾಕ್ ಎದುರಿಸುತ್ತಿರುವ ಆರ್ಥಿಕ ಸಂಕಷ್ಟವೇ ಕಾರಣ ಎನ್ನಲಾಗುತ್ತಿದೆ.
ಪಾಕಿಸ್ತಾನವು ಲಸಿಕೆಗಾಗಿ ಸಂಪೂರ್ಣವಾಗಿ ಚೀನಾವನ್ನೇ ಅವಲಂಬಿಸಿದೆ. ಆದರೆ ಪಾಕಿಸ್ತಾನದ ಜನರು ಚೀನಾಕ್ಕಿಂತ ಭಾರತದ ಲಸಿಕೆಯ ಬಗೆಗೆ ಹೆಚ್ಚು ಒಲವು ಹೊಂದಿದ್ದಾರೆ ಎಂದು ಸ್ವತಃ ಪಾಕ್ ಮಾಧ್ಯಮಗಳೇ ವರದಿ ಮಾಡಿರುವುದನ್ನು ಇಲ್ಲಿ ಗಮನಿಸಬಹುದು.
ಭಾರತ ಸರ್ಕಾರ ಈಗಾಗಲೇ ಜಗತ್ತಿನ 65 ದೇಶಗಳಿಗೆ 57.8 ಮಿಲಿಯನ್ ಡೋಸ್ ಲಸಿಕೆಯನ್ನು ವಿತರಿಸಿ, ಮಾನವೀಯತೆ ಮೆರೆದಿದೆ. ಭಾರತದ ಲಸಿಕೆಯ ಗುಣಮಟ್ಟ ಮತ್ತು ಅಡ್ಡಪರಿಣಾಮ ಇಲ್ಲದಿರುವ ಬಗೆಗೆ ಜಗತ್ತಿನಾದ್ಯಂತ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.