
ಉತ್ತರಾಖಂಡ: ಈ ವರ್ಷ ಮಹಾ ಕುಂಭಮೇಳವು ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿದ್ದು, ಕುಂಭಮೇಳಕ್ಕೆ ಸಂಬಂಧಿಸಿದ ಮಾಹಿತಿ ನೀಡುವ ಸಲುವಾಗಿ ಸಹಾಯವಾಣಿ 1902ಕ್ಕೆ ಉತ್ತರಾಖಂಡ ಪೊಲೀಸರು ಚಾಲನೆ ನೀಡಿದರು.
ಕುಂಭಮೇಳಕ್ಕೆ ತೆರಳುವ ಭಕ್ತರು ನೋಂದಣಿ, ಮೇಳ ತಲುಪುವ ಮಾರ್ಗ, ಪಾರ್ಕಿಂಗ್ ವ್ಯವಸ್ಥೆ, ಕೋವಿಡ್ ಮಾರ್ಗಸೂಚಿ, ಲಭ್ಯವಿರುವ ಆರೋಗ್ಯ ಸೇವೆ ಸೇರಿದಂತೆ ವಿವಿಧ ಮಾಹಿತಿಯನ್ನು ಈ ಸಹಾಯವಾಣಿ ಸಂಪರ್ಕಿಸಿ ಪಡೆಯಬಹುದು ಎಂದು ಮೇಳದ ಉಸ್ತುವಾರಿ ಐಜಿಪಿ ಸಂಜಯ್ ಗುಂಜ್ಯಾಲ್ ತಿಳಿಸಿದರು.
ಈ ವರ್ಷ ಮಹಾ ಕುಂಭಮೇಳವು ಹರಿದ್ವಾರದಲ್ಲಿ ಜನವರಿ 14 ಮಕರ ಸಂಕ್ರಾಂತಿಯಂದು ಆರಂಭಗೊಂಡು ಏಪ್ರಿಲ್ 27ರವರೆಗೂ ನಡೆಯಲಿದೆ. 2020ರಲ್ಲಿ ಪ್ರಯಾಗ್ ರಾಜ್ ನಲ್ಲಿ ಅರ್ಧ ಕುಂಭ ನಡೆದಿದ್ದು, ಈ ಬಾರಿ ಪೂರ್ಣ ಕುಂಭ ಹರಿದ್ವಾರದಲ್ಲಿ ನಡೆಯುತ್ತಿದೆ.
ಕುಂಭಮೇಳವನ್ನು ಆದಿ ಶಂಕರರು ಆರಂಭಿಸಿದರು ಎನ್ನಲಾಗಿದೆ. ಪುರಾತನ ನಂಬಿಕೆಗಳ ಪ್ರಕಾರ, ದೇವರು, ಅಸುರರು ಒಟ್ಟಾಗಿ ಸಮುದ್ರ ಮಂಥನ ನಡೆಸುವಾಗ ಅಮೃತ ಬರಲು ಆರಂಭವಾಯಿತು. ಅಮೃತಕ್ಕಾಗಿ ಅಸುರರು ಹಾಗೂ ದೇವರ ನಡುವೆ ನಡೆದ ಜಗಳದಲ್ಲಿ ಗರುಡ ಪಕ್ಷಿ ಅಮೃತವಿದ್ದ ಕುಂಭವನ್ನು ತೆಗೆದುಕೊಂಡು ಹೋಗುವಾಗ ಕುಂಭದಲ್ಲಿದ್ದ ಅಮೃತದ ಕೆಲವು ಹನಿಗಳು ಭೂಮಿಯ ಮೇಲೆ ಬಿದ್ದವು. ಎಲ್ಲಿ ಅಮೃತದ ಹನಿಗಳು ಬಿದ್ದಿತೋ ಅಲ್ಲಿ ಕುಂಭ ಮೇಳವನ್ನು ಆಚರಿಸಲಾಗುತ್ತದೆ. ಬೃಹಸ್ಪತಿ ಹಾಗೂ ಗುರು ಇನ್ನೊಂದು ರಾಶಿ ಚಕ್ರಕ್ಕೆ ಪ್ರಯಾಣಿಸಲು ಹನ್ನೆರಡು ವರ್ಷಗಳು ಹಿಡಿಯುವುದರಿಂದ 12 ವರ್ಷಗಳ ನಂತರ ಕುಂಭಮೇಳ ಆಯೋಜಿಸಲಾಗುತ್ತದೆ.
ಪ್ರಯಾಗ್, ಹರಿದ್ವಾರ, ನಾಸಿಕ್ ಮತ್ತು ಉಜ್ಜೈನಿಗಳಲ್ಲಿ ಕುಂಭಮೇಳವನ್ನು ನಡೆಸಲಾಗುತ್ತದೆ. ಕುಂಭ ಮೇಳವನ್ನು ನಾಲ್ಕು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಅರ್ಧ ಕುಂಭ ಮೇಳವನ್ನು ಆರು ವರ್ಷಗಳಿಗೊಮ್ಮೆ ಹರಿದ್ವಾರ ಹಾಗೂ ಪ್ರಯಾಗದಲ್ಲಿ ಆಚರಿಸಲಾಗುತ್ತದೆ, ಪೂರ್ಣ ಕುಂಭ ಹನ್ನೆರಡು ವರ್ಷಗಳಿಗೊಮ್ಮೆ, ಮಹಾ ಕುಂಭ ಮೇಳ 12 ‘ಪೂರ್ಣ ಕುಂಭ ಮೇಳ’ಗಳ ನಂತರ, ಅಂದರೆ 144 ವರ್ಷಗಳಿಗೊಮ್ಮೆ ಅಲಹಾಬಾದ್ ನಲ್ಲಿ ಆಚರಿಸಲಾಗುತ್ತದೆ. ನಾಸಿಕ್ ನ ಗೋದಾವರಿ ನದಿ ತಟದಲ್ಲಿ, ಉಜ್ಜೈನಿಯ ಶಿಪ್ರಾ ನದಿಯಲ್ಲಿ, ಹರಿದ್ವಾರದ ಗಂಗಾ, ಪ್ರಯಾಗದ ಗಂಗಾ, ಯಮುನಾ ಹಾಗೂ ಸರಸ್ವತಿ ನದಿ ಸಂಗಮದಲ್ಲಿ ಈ ಕುಂಭಮೇಳ ನಡೆಯುತ್ತದೆ. ಇಲ್ಲಿ ಪುಣ್ಯ ಸ್ನಾನ ಮಾಡುವುದರಿಂದ ಪಾಪಡಗಳು ತೊಡೆದು ಹೋಗುತ್ತದೆ ಎಂಬ ನಂಬಿಕೆ.
ವಿಶ್ವದ ಬೃಹತ್ ಧಾರ್ಮಿಕ ಸಮಾಗಮ ಎಂದೇ ಖ್ಯಾತಿಯಾಗಿರುವ “ಕುಂಭಮೇಳ” ವನ್ನು ಡಿಸೆಂಬರ್ 2017ರಲ್ಲಿ ಯುನೆಸ್ಕೊ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂದು ಶ್ಲಾಘಿಸಿತ್ತು.