
ದಕ್ಷಿಣ ಕಾಶ್ಮೀರದ ಪ್ರಸಿದ್ಧ ಗುಹಾಂತರ ದೇವಾಲಯವಾದ ಅಮರನಾಥ ದೇಗುಲಕ್ಕೆ ಜಮ್ಮು-ಕಾಶ್ಮೀರ ಸರ್ಕಾರದ ವತಿಯಿಂದ ಪ್ರತೀ ವರ್ಷ ವಾರ್ಷಿಕ ಯಾತ್ರೆ ಕೈಗೊಳ್ಳಲಾಗುತ್ತದೆ. ಈ ವರ್ಷ ಕೈಗೊಳ್ಳಲು ಬರುವವರಿಗೆ ಏಪ್ರಿಲ್ 1ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.
ಕೋವಿಡ್ ಸಂಕಷ್ಟ ಹಾಗೂ ಭದ್ರತೆಯ ಸವಾಲುಗಳ ನಡುವೆ ಕೂಡ ಹಿಂದುಗಳ ಧಾರ್ಮಿಕ ಪವಿತ್ರ ಯಾತ್ರೆಗೆ ಚಾಲನೆ ನೀಡಲಾಗುತ್ತಿದೆ. ಜೂನ್ 28ರಿಂದ ಆಗಸ್ಟ್ 22ರವರೆಗೆ ಯಾತ್ರೆ ನಡೆಯಲಿದೆ.
3880 ಮೀಟರ್ ಎತ್ತರದಲ್ಲಿರುವ ಹಿಮಾಲಯದ ಕಣಿವೆಯಲ್ಲಿರುವ ಪವಿತ್ರ ಹಿಮಲಿಂಗ ದರ್ಶನಕ್ಕೆ ಜೂನ್ 28ರಿಂದ ಪಹಲ್‌ಗಾಂವ್ ಮತ್ತು ಬಲ್‌ತಾಲ್ ಈ ಎರಡೂ ಮಾರ್ಗಗಳ ಮೂಲಕ ಒಟ್ಟು 56 ದಿನಗಳ ಕಾಲ ಅಮರನಾಥಯಾತ್ರೆ ಕೈಗೊಳ್ಳಲಾಗುತ್ತದೆ ಎಂದು ಅಮರನಾಥ ದೇವಾಲಯ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿತೀಶ್ವರ್ ಕುಮಾರ್ ತಿಳಿಸಿದರು.
ದೇಶಾದ್ಯಂತ ಇರುವ ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು-ಕಾಶ್ಮೀರ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್‌ನ ನಿಗದಿತ 446 ಶಾಖೆಗಳಲ್ಲಿ ಯಾತ್ರಾರ್ಥಿಗಳು ನೋಂದಣಿ ಮಾಡಿಸಬಹುದಾಗಿದೆ ಎಂದು ಹೇಳಿದ್ದಾರೆ.
ವಿವಿಧ ರಾಜ್ಯಗಳ ಯಾವ ಬ್ಯಾಂಕ್ ಶಾಖೆಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು ಮತ್ತು ಅನುಸರಿಸಬೇಕಾದ ನಿಯಮಾವಳಿಗಳ ಬಗ್ಗೆ ದೇವಸ್ಥಾನದ ವೆಬ್‍ಸೈಟ್‍ನಲ್ಲಿ ಸಮಗ್ರ ಮಾಹಿತಿಗಳನ್ನು ಪ್ರಕಟಿಸಲಾಗಿದೆ. ಕೋವಿಡ್ ಸೋಂಕು ಸೇರಿದಂತೆ ರಾಜ್ಯ, ಕೇಂದ್ರ ಹಾಗೂ ಅಧಿಕೃತ ವೈದ್ಯಕೀಯ ಸಂಸ್ಥೆಗಳು ನೀಡಿದ ಆರೋಗ್ಯ ದೃಢೀಕರಣ ಪತ್ರವನ್ನು ನೋಂದಣಿ ಸಮಯದಲ್ಲಿ ಸ್ವೀಕರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅತಿ ಎತ್ತರ ಪ್ರದೇಶದ ಯಾತ್ರೆಯಾಗಿರುವುದರಿಂದ ಆರೋಗ್ಯ ದೃಢೀಕರಣ ಪತ್ರ ಅಗತ್ಯವಾಗಿದೆ. ಮಾ.15ರ ನಂತರ ಪಡೆದಿರುವ ಪ್ರಮಾಣ ಪತ್ರವನ್ನು ಮಾತ್ರ ಹಾಜರುಪಡಿಸಬೇಕು. ಯಾತ್ರಾರ್ಥಿಗಳು ದೇವಸ್ಥಾನ ಆಡಳಿತ ಮಂಡಳಿ ಸೂಚಿಸಿದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. 13 ವರ್ಷದ ಒಳಗಿನ ಮಕ್ಕಳು, 75 ವರ್ಷ ದಾಟಿದ ವೃದ್ಧರು ಮತ್ತು 6 ತಿಂಗಳು ಮೇಲ್ಪಟ್ಟ ಗರ್ಭಿಣಿಯರು ಯಾತ್ರೆಗೆ ನೋಂದಣಿ ಮಾಡಿಕೊಳ್ಳಬಾರದು ಎಂದು ಅವರು ಸೂಚಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ದೇವಸ್ಥಾನದ ವೆಬ್‍ಸೈಟ್ ಅನ್ನು ಸಂಪರ್ಕಿಸಿ. http://www.shriamarnathjishrine.com