Clik here to view.

ರಾಜ್ಯದಾದ್ಯಂತ ಮಾ.27ರಂದು ನಡೆದ ಮೆಗಾ ಲೋಕ ಅದಾಲತ್ ನಲ್ಲಿ ಒಂದೇ ದಿನ ಒಟ್ಟು 3.32 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, 1,033 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ ಎಂದು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಅರವಿಂದ ಕುಮಾರ್ ತಿಳಿಸಿದ್ದಾರೆ.
ಜಿಲ್ಲಾ ಹಾಗೂ ತಾಲೂಕು ಮಟ್ಟ ಸೇರಿದಂತೆ ರಾಜ್ಯದೆಲ್ಲೆಡೆಯ ಒಟ್ಟು 963 ನ್ಯಾಯಪೀಠಗಳಲ್ಲಿ ನಡೆದ ಈ ಲೋಕ ಅದಾಲತ್ ನಲ್ಲಿ 19,113 ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯಗಳಲ್ಲಿ ಬಾಕಿಯಿದ್ದ 3,13,823 ಪ್ರಕರಣಗಳು ಸೇರಿದಂತೆ ಒಟ್ಟು 3,32,936 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಆ ಪ್ರಕರಣಗಳ ಸಂಬಂಧ ಕಕ್ಷಿದಾರರಿಗೆ ಒಟ್ಟು 1033 ಕೋಟಿ ರೂ.ಗಳನ್ನು (ರೂ. 1033,53,65,965) ಪರಿಹಾರವಾಗಿ ಪಾವತಿಸಲಾಗಿದೆ ಎಂದರು.
ಇತ್ಯರ್ಥಗೊಂಡ ಪ್ರಕರಣಗಳು: 3,32,936
ಆಸ್ತಿ ಭಾಗ ವಿವಾದ- 3,853
ಚೆಕ್ ಬೌನ್ಸ್- 11,333
ಮೋಟಾರು ವಾಹನ ಕಾಯ್ದೆ- 4351
ವಿವಾಹ ವಿವಾದ- 2,859
ಸರ್ಕಾರಕ್ಕೆ ಉಳಿತಾಯವಾದ ಒಟ್ಟು ಮೊತ್ತ- ರೂ. 140 ಕೋಟಿ
ಕಕ್ಷಿದಾರರಿಗೆ ನೀಡಿದ ಪರಿಹಾರದ ಒಟ್ಟು ಮೊತ್ತ : ರೂ. 1033 ಕೋಟಿ
ಅದಾಲತ್‌ನಲ್ಲಿ ಒಂದೇ ದಿನಕ್ಕೆ ಇಷ್ಟೊಂದು ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದು ದಾಖಲೆ ಎಂದ ಅವರು ಇತ್ಯರ್ಥಗೊಂಡ ಪ್ರಕರಣಗಳಲ್ಲಿ ಆಸ್ತಿ ಭಾಗಕ್ಕೆ ಸಂಬಂಧಿಸಿದ 3,853 ಪ್ರಕರಣಗಳು, ಸರ್ಕಾರಿ ಜಮೀನು ಸ್ವಾಧೀನ ಕುರಿತ 1,393 ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಒಟ್ಟು ರೂ. 133.9 ಕೋಟಿ (ರೂ. 133,90,75,793) ಪರಿಹಾರ ಪಾವತಿಸಲಾಗಿದೆ. 11,333 ಚೆಕ್ ಬೌನ್ಸ್‌ಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸಿ ಒಟ್ಟು 410 ಕೋಟಿ ರೂ. ಹಾಗೂ ಮೋಟಾರು ವಾಹನ ಕಾಯ್ದೆಯಡಿ 4351 ಪ್ರಕರಣಗಳನ್ನು ಇತ್ಯರ್ಥಪಡಿಸಿ, ರೂ. 144 ಕೋಟಿಗಳ ಪರಿಹಾರ ಕೊಡಿಸಲಾಗಿದೆ. ಐದಾರು ವರ್ಷಗಳು ಕಳೆದರೂ ಇತ್ಯರ್ಥ ವಾಗದೇ ಉಳಿದ ವೈವಾಹಿಕ ಜೀವನಕ್ಕೆ ಸಂಬಂಧಿಸಿದ 2,859 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ 29 ಜೋಡಿಗಳನ್ನು ಒಂದುಗೂಡಿಸಲಾಗಿದೆ. ಇನ್ನು ವಿವಿಧ ಪ್ರಕರಣಗಳಲ್ಲಿ ಒಟ್ಟು ರೂ. 18 ಕೋಟಿ (ರೂ.18,19,89,648) ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಮೆಗಾ ಲೋಕ ಅದಾಲತ್ ಮೂಲಕ ರಾಜ್ಯ ಸರ್ಕಾರಕ್ಕೆ ಒಟ್ಟು ರೂ. 140 ಕೋಟಿ (ರೂ. 140,83,71,900) ಉಳಿತಾಯ ಮಾಡಲಾಗಿದೆ ಎಂದರು.
ರಾಜ್ಯದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಒಟ್ಟು 1100 ನ್ಯಾಯಾಧೀಶರು ದಿನಕ್ಕೆ 3 ಪ್ರಕರಣ ಇತ್ಯರ್ಥಪಡಿಸಿದರೂ 95 ಕೆಲಸದ ದಿನಗಳಲ್ಲಿ ಒಟ್ಟು 3,12,694 ಪ್ರಕರಣಗಳನ್ನು ಬಗೆಹರಿಸಬಹುದು. ಈ ನ್ಯಾಯಾಲಯಗಳು ಕಲಾಪ ನಡೆಸಲು ನ್ಯಾಯಾಧೀಶರು ಮತ್ತು ಸಿಬ್ಬಂದಿಯ ವೇತನಕ್ಕಾಗಿ ಒಟ್ಟು ರೂ. 122 ಕೋಟಿ (ರೂ. 122,63,82,342) ಖರ್ಚಾಗುತ್ತದೆ. ಮಾ.27ರಂದು ನಡೆದ ಮೆಗಾ ಅದಾಲತ್ ಮೂಲಕ ಒಂದೇ ದಿನ 963 ನ್ಯಾಯಪೀಠಗಳು ಕಾರ್ಯನಿರ್ವಹಿಸಿ ಒಟ್ಟು 3,32,936 ಪ್ರಕರಣಗಳನ್ನು ಇತ್ಯರ್ಥಪಡಿಸಿ ಸರ್ಕಾರಕ್ಕೆ ಒಟ್ಟು ರೂ. 140 ಕೋಟಿ ಉಳಿತಾಯ ಮಾಡಲಾಗಿದೆ ಎಂದರು.