
ಪೋಲಿಯೋಗೆ ಸೆಡ್ಡು ಹೊಡೆದು , ಛಲವೇ ಉಸಿರಾಗಿಸಿಕೊಂಡ ಕಿರಣ್ ಶೇರಖಾನ್ ಗೆ 49ನೇ ವಾರ್ಷಿಕ ಕಲಾ ಪ್ರದರ್ಶನ ಬಹುಮಾನ ದೊರಕಿದೆ.
ಆತ ಮೂರನೇ ವರ್ಷದವರೆಗೂ ನಮ್ಮ ನಿಮ್ಮಂತೆ ಆಟವಾಡಿಕೊಂಡಿದ್ದ, ಇದ್ದಕ್ಕಿದ್ದಂತೆ ಕಾಲುಗಳು ಚಲನೆ ಕಳೆದುಕೊಳ್ಳತೊಡಗಿತು! ಆ ಬಾಲಕನ ಬಣ್ಣದ ಬದಕಿನ ಕನಸನ್ನು ಕಿತ್ತುಕೊಳ್ಳಲು ಹವಣಿಸಿದ್ದ ಪೋಲಿಯೋ…ತನ್ನ ಕೆಲಸ ಸಾಧಿಸಿ ನಕ್ಕಿತು. ಬಾಲಕ ಕಿರಣ್ ಅಳಲಿಲ್ಲ! ಕಂಗೆಡಲಿಲ್ಲ!! ಪೋಲಿಯೋಗೆ ಸೆಡ್ಡು ಹೊಡೆದು , ಛಲವೇ ಉಸಿರಾಗಿಸಿಕೊಂಡ.. ಬದುಕು ಕಟ್ಟಿಕೊಳ್ಳಲೆತ್ನಿಸತೊಡಗಿದ ಕಿರಣ್ ಶೇರಖಾನ್ ನ ಛಲ ಕಂಡ ಪೋಲಿಯೋ ಆತನ ತಂಗಿಯನ್ನು ಘಾಸಿಗೊಳಿಸಿ “ಈಗೇನು ಮಾಡುವೆ” ಎಂದು ಗಹಗಹಿಸಿ ನಕ್ಕಿತು.
ಕಿರಣ್ ಈಗ ಪೋಲಿಯೋ ಕಡೆಗೆ ತಿರಸ್ಕಾರ ನಗೆಬೀರಿ.. ಬದುಕು ಕಟ್ಟಿಕೊಳ್ಳಲೇತ್ನಿಸಿದ.. ಸೋಲಲಿಲ್ಲ… ಭಯಪಟ್ಟು ಕೂಡಲಿಲ್ಲ, ತನ್ನ ಚಿತ್ರಕಲೆ ಗೀಳನ್ನೆ ತನ್ನ ತನ್ನ ಛಲದ ಬದುಕಿಗೆ ಆಸರೆಯಾಗಿಸಿಕೊಂಡ!! . ನ್ಯೂನತೆ ಬದಿಗಿಟ್ಟು ಚಿತ್ರಕಲೆಯನ್ನೆ ಜೀವನ ಉಸಿರಾಗಿಸಿಕೊಂಡ ಕಿರಣ್ ನಿಲ್ಲಲಿಲ್ಲ.. ತನ್ನ ಕಲೆ ಸಾಧನೆ ಪಥದಲ್ಲಿ ಮಾನಸಿಕವಾಗಿ ದಾಪುಗಾಲು ಹಾಕಿ ಓಡುತ್ತಿದ್ದಾನೆ!!! ..
ಹುಬ್ಬಳ್ಳಿಯ ಕಿರಣ್ ಶೇರಖಾನ್ ತನ್ನ ಕಲಾಕೃತಿಗಳನ್ನು ಮಾರಿ ತಾಯಿಯೊಂದಿಗೆ ಜೀವನ ನಡೆಸುತ್ತಿರುವ ಇತನ ತಂಗಿಯೂ ಪೋಲಿಯೋ ಪೀಡಿತ ನತದೃಷ್ಟೆ… ಇದ್ಯಾವುದು ಕಿರಣನನ್ನು ಬಾಧಿಸಲಿಲ್ಲ, ತನ್ನ ಕಲಾಪಥದಲ್ಲಿ ವಿಜಯಿಪತಾಕೆ ಹಿಡಿದು ಮುನ್ನುಗ್ಗತ್ತಲೇ ಹೋದ. ಕಲೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಮುಗಿಸಿ ದೇಶದುದ್ದಗಲಕ್ಕೂ ತನ್ನ ಇರುವಿಕೆಯನ್ನು ಕೃತಿ ಮೂಲಕವೇ ತಿಳಿಸಿಕೊಟ್ಟು ಬದುಕಲು ಛಲ ಬೇಕು, ಸಾಧನೆಗೆ ಗುರಿ ಬೇಕು ಎಂದೆನ್ನುವ ನಮ್ಮ ನಡುವಿನ ಶೇರ್ ಅನ್ನು ಅರಸಿ ಸಾಕಷ್ಟು ಪ್ರಶಸ್ತಿಗಳು ಹುಡುಕಿ ಬಂದ ಸಂಖ್ಯೆಗಳೆಷ್ಟೊ.
ಕಳೆದ ವರ್ಷದಿಂದ ಹೊಸತನದಲ್ಲಿ ಕಲಾಕೃತಿಗಳ ಪ್ರಯೋಗಕ್ಕೆ ಒಡ್ಡಿಕೊಂಡು ನಾವಿನ್ಯತೆ ಪಡೆದ ಕಲಾಕೃತಿಗಳಿಗೆ ಇದೀಗ ಕರ್ನಾಟಕ ಲಲಿತಕಲಾ ಅಕಾಡೆಮಿಯ 49ನೇ ವಾರ್ಷಿಕ ಕಲಾ ಪ್ರದರ್ಶನ ಗೌರವ ದೊರಕಿದೆ. ಕಿರಣನಂಥ ಕಲಾವಿದರನ್ನು ಗುರುತಿಸುತ್ತಿರುವುದು ಅಕಾಡೆಮಿಗೂ ಗೌರವ. ಕಿರಣ್ ನಿನ್ನ ಬದುಕು ಇನ್ನಷ್ಟು ಸಾಧನೆ ಶಿಖರಕ್ಕೆರಲಿ ಶುಭಹಾರೈಕೆಗಳು.