
ನವದೆಹಲಿ: ಹೊಸ ಆಟಿಕೆಗಳನ್ನು ಅಭಿವೃದ್ಧಿಪಡಿಸುವುದರತ್ತ ಗಮನ ಹರಿಸಿ ಮತ್ತು ಸ್ಥಳೀಯ ಆಟಿಕೆಗಳಿಗೆ ಧ್ವನಿಯಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಕರೆ ನೀಡಿದರು.
ಇಂದು, ಜೂನ್ 24ರಂದು ‘ಟಾಯ್‌ಕಥಾನ್-2021ರ ಸ್ಪರ್ಧಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಅವರು, ನಮ್ಮ ಗಮನವು ಹೊಸ ಆಟಿಕೆಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಇರಬೇಕು. ಭಾರತೀಯತೆಯ ಪ್ರತಿಯೊಂದು ಅಂಶವನ್ನೂ ಆಸಕ್ತಿದಾಯಕ, ಸಂವಾದಾತ್ಮಕ ರೀತಿಯಲ್ಲಿ ಪ್ರಸ್ತುತಪಡಿಸುವಂತಹ ಆಟಿಕೆಗಳನ್ನು ಸಿದ್ಧಪಡಿಸಿ’ ಎಂದರು.
ಪ್ರಸ್ತುತ ಸುಮಾರು 100 ಶತಕೋಟಿ ಡಾಲರ್‌ಗಳಷ್ಟಿರುವ ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಭಾರತದ ಪಾಲು ಕೇವಲ 1.5 ಶತಕೋಟಿ ಡಾಲರ್. ಇನ್ನು ಭಾರತದ ಶೇ. 80ರಷ್ಟು ಆಟಿಕೆಗಳು ವಿದೇಶಗಳಿಂದ ಆಮದಾಗುತ್ತಿವೆ. ಇದರಿಂದ ಕೋಟ್ಯಂತರ ರೂಪಾಯಿ ವಿದೇಶಕ್ಕೆ ರವಾನೆಯಾಗುತ್ತಿದೆ. ಈ ಸ್ಥಿತಿ ಬದಲಾಗಬೇಕಾದ ಅಗತ್ಯವಿದೆ ಎಂದರು.
ಆಟಿಕೆಗಳ ಮಹತ್ವದ ಕುರಿತು ಮಾತನಾಡಿದ ಪ್ರಧಾನಿ, ’ಮಗುವಿಗೆ ಮನೆಯೇ ಮೊದಲ ಪಾಠಶಾಲೆಯಾದರೆ, ಆಟಿಕೆಗಳೇ ಮೊದಲ ಪುಸ್ತಕ ಮತ್ತು ಮೊದಲ ಗೆಳೆಯರು’ ಎಂದರು.
2021ರ ಜನವರಿ 5 ರಿಂದ ಆರಂಭವಾದ ಟಾಯ್‌ಕಥಾನ್‌ನಲ್ಲಿ ದೇಶದೆಲ್ಲೆಡೆಯ 1.2 ಲಕ್ಷ ಜನರು ಭಾಗವಹಿಸಿದ್ದರು. ಈ ಪೈಕಿ 17,000 ಜನರು ಯೋಜನೆಗಳನ್ನು ಸಲ್ಲಿಸಿದ್ದರು. ಅದರಲ್ಲಿ 1567 ಜನರ ಯೋಜನೆಗಳು ಅಂತಿಮ ಹಂತಕ್ಕೆ ತಲುಪಿದ್ದವು. ಮೂರು ದಿನಗಳ ಆನ್‌ಲೈನ್ ಟಾಯ್‌ಕಥಾನ್ ಜೂನ್ 22ರಿಂದ ಆರಂಭವಾಗಿದ್ದು, ಜೂನ್ 24, ಇಂದು ಕೊನೆಗೊಳ್ಳಲಿದೆ.
ಶಿಕ್ಷಣ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸಚಿವಾಲಯ, ಜವಳಿ ಸಚಿವಾಲಯ, ವಾರ್ತಾ ಮತ್ತು ಪ್ರಸಾರ ಇಲಾಖೆ ಜಂಟಿಯಾಗಿ ‘ಟಾಯ್‌ಕಥಾನ್-೨೦2021’ನ್ನು ಆಯೋಜಿಸಿವೆ. ಜನಸಮೂಹದ ಮೂಲಕ ನವೀನ ಆಟಿಕೆ ಮತ್ತು ಆಟಗಳ ವಿಚಾರಗಳನ್ನು ತಿಳಿದುಕೊಳ್ಳುವುದು ಇದರ ಹಿಂದಿನ ಉದ್ದೇಶ.