
ನವದೆಹಲಿ: ಪ್ರತಿ ಮನೆಗೂ ನಲ್ಲಿಯ ಮೂಲಕ ನೀರು ಪೂರೈಸುವ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಜಲಜೀವನ್ ಮಿಷನ್’ ಯೋಜನೆಯ ಮೂಲಕ ದೇಶದ 7.06 ಕೋಟಿ ಕುಟುಂಬಗಳು ವಾಸವಿರುವ ಮನೆಗಳಿಗೆ ನಲ್ಲಿ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಜಲಶಕ್ತಿ ಸಚಿವಾಲಯದ ವರದಿ ತಿಳಿಸಿದೆ.
ಗ್ರಾಮೀಣ ಪ್ರದೇಶದ ಪ್ರತಿ ವ್ಯಕ್ತಿಗೆ ಆಯಾ ರಾಜ್ಯಗಳ ಸಹಭಾಗಿತ್ವದಲ್ಲಿ ನಿತ್ಯ 55 ಲೀಟರ್ ಕುಡಿಯುವ ನೀರು ಪೂರೈಸುವ ಉದ್ದೇಶದೊಂದಿಗೆ 2019ರ ಆಗಸ್ಟ್‌ನಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ‘ಜಲಜೀವನ ಮಿಷನ್’ಗೆ ಚಾಲನೆ ನೀಡಿತ್ತು. 2024ರೊಳಗೆ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಿದೆ.
ದೇಶದಲ್ಲಿ ಒಟ್ಟು 19.19 ಕೋಟಿ ಗ್ರಾಮೀಣ ಕುಟುಂಬಗಳಿದ್ದು ಈ ಪೈಕಿ ಶೇ 36.83ರಷ್ಟು (7.06 ಕೋಟಿ) ಕುಟುಂಬಗಳು ವಾಸವಿರುವ ಮನೆಗಳಿಗೆ ನಲ್ಲಿ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಮನೆಗಳ ನೀರು ಪೂರೈಕೆಯ ಪ್ರಮಾಣದಲ್ಲಿ ಕರ್ನಾಟಕ ಕಳಪೆ ಸಾಧನೆ ಮಾಡಿದ್ದು, ಕರ್ನಾಟಕದ 91.19 ಲಕ್ಷ ಕುಟುಂಬಗಳಲ್ಲಿ ಕೇವಲ 27.27 ಲಕ್ಷ ಕುಟುಂಬಗಳು ನೀರಿನ ಸಂಪರ್ಕ ಹೊಂದಿವೆ ಎಂದು ಸಚಿವಾಲಯದ ವರದಿ ತಿಳಿಸಿದೆ.
ಗೋವಾ ಮತ್ತು ತೆಲಂಗಾಣ ರಾಜ್ಯವು ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನೀರು ಒದಗಿಸಿ ಶೇ. 100ರಷ್ಟು ಸಾಧನೆ ತೋರಿ ಮೊದಲ ಸ್ಥಾನದಲ್ಲಿವೆ. ಆದರೆ ಕರ್ನಾಟಕವು 19ನೇ ಸ್ಥಾನದಲ್ಲಿದೆ. ಕರ್ನಾಟಕದ ಶೇ. 29.91 ಗ್ರಾಮಗಳಲ್ಲಿ ಮಾತ್ರ ನಲ್ಲಿಗಳ ಮೂಲಕ ನೀರು ಪೂರೈಕೆ ವ್ಯವಸ್ಥೆ ಇದೆ ಎಂದು ಜಲಶಕ್ತಿ ಸಚಿವಾಲಯ ಹೇಳಿದೆ.
ದ್ವಿತೀಯ ಸ್ಥಾನದಲ್ಲಿ ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್- ನಿಕೋಬಾರ್ ನಲ್ಲಿ ಶೇ 98.29ರ ಸಾಧನೆ ಕಂಡುಬಂದಿದೆ.
ಮಂಡ್ಯ ಅಗ್ರಣಿ; ಉ. ಕನ್ನಡಕ್ಕೆ ಕೊನೆಯ ಸ್ಥಾನ: ಮನೆಯ ಅಂಗಳಕ್ಕೆ ನೀರು ಒದಗಿಸಿರುವ ಪ್ರಮಾಣದಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಒಟ್ಟು 3.87 ಲಕ್ಷ ಕುಟುಂಬಗಳ ಪೈಕಿ 2.20 ಲಕ್ಷ ಕುಟುಂಬಗಳಿಗೆ (ಶೇ 56.98) ಸಂಪರ್ಕ ಕಲ್ಪಿಸಲಾಗಿದೆ.
2.89 ಲಕ್ಷ ಕುಟುಂಬಗಳ ಪೈಕಿ 1.52 ಲಕ್ಷ ಕುಟುಂಬಗಳಿಗೆ (ಶೇ 52.57) ನೀರು ಒದಗಿಸಿರುವ ದಕ್ಷಿಣ ಕನ್ನಡ ಜಿಲ್ಲೆ ನಂತರದ ಸ್ಥಾನದಲ್ಲಿದ್ದರೆ, ಧಾರವಾಡ (45.53) ಮತ್ತು ಕೊಪ್ಪಳ (43.07) ಜಿಲ್ಲೆಗಳು ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ. ಒಟ್ಟು 2.67 ಲಕ್ಷ ಮನೆಗಳ ಪೈಕಿ ಕೇವಲ 23,721 (ಶೇ 8.86) ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಿರುವ ಉತ್ತರ ಕನ್ನಡ ಜಿಲ್ಲೆಯದ್ದು, ರಾಜ್ಯದಲ್ಲಿ ಕಂಡುಬಂದಿರುವ ಕಳಪೆ ಸಾಧನೆಯಾಗಿದೆ.