Clik here to view.

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾದ ರಸ್ತೆಗಳಿಗೆ ಶ್ರೀ ರಾಮಜನ್ಮಭೂಮಿ.ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದ ರಾಮ್ ಕುಮಾರ ಕೊಠಾರಿ ಮತ್ತು ಶರದ್ ಕುಮಾರ್ ಕೊಠಾರಿ ಸಹೋದರರ ಹೆಸರನ್ನು ನಾಮಕರಣ ಮಾಡಿದೆ.
1990ರಲ್ಲಿ ನಡೆದ 2ನೇ ಹಂತದ ಕರಸೇವೆಯಲ್ಲಿ ಕೊಠಾರಿ ಸಹೋದರರು ವಿವಾದಗ್ರಸ್ಥ ಕಟ್ಟಡದ ಗುಂಬಜ್ ಮೇಲೆ ಭಗವಾಧ್ವಜವನ್ನು ಹಾರಿಸಿದ್ದರು. ಅತ್ಯಂತ ಕರಸೇವಕರ ಮೇಲೆ ಅಮಾನುಷವಾಗಿ ನಡೆದುಕೊಂಡ ಮುಲಾಯಂ ಸಿಂಗ್ ಸರ್ಕಾರದ ಪೊಲೀಸರು ಕೊಠಾರಿ ಸಹೋದರರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿತ್ತು.
ಈ ಕುರಿತು ಬೆಂಗಳೂರಿನ ಆಚಾರ್ಯ ಇನ್ ಸ್ಟಿಟ್ಯೂಟ್ ನ ಅಸಿಸ್ಟೆಂಟ್ ಪ್ರೊಫೇಸರ್ ಪವನ್ ಚೌತಾಯಿ ಅವರು ರಾಮಮಂದಿರದ ಶಿಲಾನ್ಯಾಸ ಸಂದರ್ಭದಲ್ಲಿ ಬರೆದ ಬರಹವನ್ನು ಇಲ್ಲಿ ನೀಡಲಾಗಿದೆ.
ಇದೆಂತಹಾ ಸಂದರ್ಭ, ಸುಧೀರ್ಘ ಹೋರಾಟದ ನಂತರ ಇದೀಗ ಭಾರತದ ಕುಲದೀಪನ ಮಂದಿರಕ್ಕೆ ಶಿಲಾನ್ಯಾಸ ನಡೆದಿದೆ.
ಈ ದಿನಕ್ಕೆ ಅದೆಷ್ಟು ಜನರ ನಿರಂತರ ಹೋರಾಟದ, ತ್ಯಾಗದ ಮತ್ತು ಬಲಿದಾನದ ಅರ್ಪಣೆಗಳಿದೆ ಎಂದರೆ, ಆ ಒಬ್ಬೂಬ್ಬ ಮಹಾತ್ಮನ ಪ್ರಾಣ ಒಂದೊಂದು ಅಡಿಗಲ್ಲಾಗಿ ರಾಮಮಂದಿರವನ್ನ ಕಟ್ಪಲಿವೆ.
ಈ ಹರುಷದ ಸಮಯದಲ್ಲಿ ನಾವು ಆ ಕರಸೇವಕರ ತ್ಯಾಗವನ್ನು ಮರೆಯದಿರೋಣ.
ಅದು ಅಕ್ಟೋಬರ್ 23, 1990 ಬಿಹಾರದಲ್ಲಿ ರಥಯಾತ್ರೆ ನಿಲ್ಲಿಸಿ ಅಡ್ವಾಣಿ ಜೀ ಯವರನ್ನು ಬಂಧಿಸಿಯಾಗಿತ್ತು.
ಅದಕ್ಕಿಂತ ಒಂದು ದಿನದ ಮುಂಚೆ ಬಂಗಾಳದ ಸಿಂಹ ಹೃದಯದ ಸಹೋದರರಿಬ್ಬರು ರಾಮ ಮಂದಿರ ಕಟ್ಟಿಯೇ ಬರುವುದಾಗಿ, ಹಸೆಮಣೆ ಏರಲಿದ್ದ ಮುದ್ದು ತಂಗಿ ಪೂರ್ಣಿಮಾಳಿಗೆ ಮಾತು ಕೊಟ್ಟು, ಒಲ್ಲದ ಮನಸಿನ ಅಪ್ಪನ ಅನುಮತಿ ಪಡೆದು ಹೊರಟರು.
ತೀವ್ರ ನಿರ್ಬಂಧಗಳ ನಡುವೆ ವಾರಾಣಸಿ ತಲುಪಿ ಅಲ್ಲಿಂದ 200 ಕಿಲೋಮೀಟರ್ ನಡೆದು ಅಯೋಧ್ಯೆ ತಲುಪಿದವರ ನಾಲಿಗೆಯಲ್ಲಿ ರಾಮನಾಮ, ಹೃದಯದಲ್ಲಿ ರಾಮ ಮಂದಿರದ ಸಂಕಲ್ಪ.
ಯಾವಾಗ ರಥಯಾತ್ರೆ ತಡೆದು ಅಡ್ವಾಣಿ ಜೀ ಅವರ ಬಂಧನವಾಯಿತೋ, ಯಾವಾಗ “ವಹಾ ಪರಿಂದಾಭೀ ಪಾರ್ ನಹೀ ಮಾರೇಗ” “ಅಲ್ಲಿ ಒಂದು ಹಕ್ಕಿಯನ್ನೂ ಹಾರಲಿಕ್ಕೆ ಬಿಡಲ್ಲ” ಎಂಬ ಮಾತು ಅಂದಿನ ಉ.ಪ್ರ. ಮುಖ್ಯಮಂತ್ರಿ ಗಳಿಂದ ಕೇಳಿಬರತ್ತೋ, ಕೆರಳಿಹೋಗ್ತಾರೆ ಈ ಸಹೋದರರು. ಅಲ್ಲಿಂದ ಮುಂದೆ ನಡೆದದ್ದೇ ಒಂದು ರೋಚಕ ಘಟನೆ.
ಮಾರನೇ ದಿನ ಬೆಳಿಗ್ಗೆ ಸುಮಾರು ನೂರು ಜನ ಕರಸೇವಕರನ್ನ ಒಗ್ಗೂಡಿಸಿಕೊಂಡು ವಿವಾದಿತ ಸ್ಥಳ ತಲುಪೇ ಬಿಡ್ತಾರೆ. ಪ್ರಾಣದ ಹಂಗು ತೊರೆದು ಆ ಜಾಗದ ತುತ್ತತುದಿಗೇರಿದವರ ಕೈಯಲ್ಲಿ ಸರ್ಕಾರಕ್ಕೆ ಕಟು ಎಚ್ಚರಿಕೆ ಕೊಡುವಂತೆ ಅಖಂಡ ಹಿಂದೂ ಸಾಮ್ರಾಜ್ಯದ ಲಾಂಛನದ ಭಗವಧ್ವಜ.
ಜೈ ಶ್ರೀ ರಾಮ್ ಅಂತ ಇನ್ನೇನು ಧ್ವಜವನ್ನ ಗೋಪುರದಲ್ಲಿ ನೆಡಬೇಕು, ಅಷ್ಟರಲ್ಲಿ ಧ್ವಜವನ್ನ ಹಿಡಿದ ಅಣ್ಣನ ಎದೆಯಿಂದ ರಕ್ತ ಧಾರಾಕಾರವಾಗಿ ಹರಿದು ಬರೋಕೆ ಶುರುವಾಗುತ್ತೆ. ಪೋಲೀಸರ ಗುಂಡು ನೇರವಾಗಿ ಅವನ ಎದೆಯಲ್ಲಿ.
ರಕ್ತ ಬಸಿದು ನೋವಿನಿಂದ ಇನ್ನೇನು ಕೆಳಗೆ ಬೀಳಬೇಕು ಅಷ್ಟರಲ್ಲಿ ಒಂದು ಮೆಟ್ಟಿಲು ಕೆಳಗೆ ನಿಂತಿದ್ದ ತಮ್ಮ “ಯಾವಕಾರಣಕ್ಕೂ ಧ್ವಜವನ್ನ ನೆಲಕ್ಕಿಡಬೇಡ” ಅಂತ ಕೂಗಿಹೇಳ್ತಾನೆ. ಅಷ್ಟರಲ್ಲಿ ತಮ್ಮನಿಗೂ ಗುಂಡು ಬೀಳುತ್ತೆ.
ಭಗವಧ್ವಜವನ್ನು ಗೋಪುರದ ಮೇಲೆ ನಿಲ್ಲಿಸಿಯೇ ಸೋದರರಿಬ್ಬರೂ ಕೆಳಕ್ಕುರುಳುತ್ತಾರೆ. ಅವರ ಧೀರತೆಯನ್ನು ಕಂಡು ಆಗಿನ ಸರ್ಕಾರ ನಡುಗಿಹೋಗತ್ತೆ.
ಪೋಲೀಸರ ಗುಂಡಿಗೆ ಅಂದು 16 ಜನ ಕರಸೇವಕರು ಹುತಾತ್ಮರಾದರು, ಪ್ರತಿಯೋಬ್ಬರ
ನಾಲಿಗಯೂ ಕೊನೆಯದಾಗಿ ನುಡಿದದ್ದು ರಾಮ ನಾಮ,
ಕಣ್ಣಲ್ಲಿ ತುಂಬಿದ್ದು ರಾಮ ಮಂದಿರದ ಕನಸು,
ಹೃದಯದಲಿ ನಿಂತಿದ್ದು ರಾಮ ಮಂದಿರದ ಸಂಕಲ್ಪ.
ಆ ವೀರ ಸೋದರರೇ ಬಂಗಾಳದ ರಾಮ್ ಕೊಠಾರಿ ಮತ್ತು ಶರದ್ ಕೊಠಾರಿ.
ಇಂಥಾ ಅಸಂಖ್ಯ ಕರಸೇವಕರ ತ್ಯಾಗ ಬಲಿದಾನಗಳನ್ನ ನಾವು ಮರೆಯದಿರೋಣ. ಆ ಮಹಾತ್ಮರ ಪಾದಗಳಿಗೆ ನಮ್ಮದೊಂದು ಶಿರಸಾಷ್ಠಾಂಗ ನಮನಗಳಿರಲಿ.
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ|
ರಘುನಾಥಾಯ ನಾಥಾಯ ಸೀತಾಯಾ: ಪತಯೇ ನಾಮ:||
ಜೈ ಶ್ರೀ ರಾಮ್