
ಭೋಪಾಲ್: ಭಾರತೀಯ ಜನತಾ ಪಾರ್ಟಿ ವತಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಎರಡನೇ ಸರಸಂಘಚಾಲಕ ಮಾಧವರಾವ್ ಸದಾಶಿವರಾವ್ ಗೋಲ್ವಳ್ಕರ್ ಅವರ ಹೆಸರಿನಲ್ಲಿ ಮಧ್ಯಪ್ರದೇಶದ ಭೋಪಾಲ್ ನಲ್ಲಿ 1000 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಈ ಕೇಂದ್ರದಲ್ಲಿ 25 ಆಮ್ಲಜನಕ ಸಾಂದ್ರಕಗಳ ವ್ಯವಸ್ಥೆಯಿದೆ. ಇಲ್ಲಿ 200 ವೈದ್ಯರು ಮತ್ತು ಅರೆವೈದ್ಯರ ಸೇವೆ ಲಭ್ಯವಿರುತ್ತದೆ.
ಮನೆಯಲ್ಲಿ ಐಸೋಲೇಷನ್‌ಗೆ ಸ್ಥಳವಿಲ್ಲದ ರೋಗಿಗಳಿಗೆ ಮತ್ತು ಚಿಕಿತ್ಸೆಯ ಸಮಯದಲ್ಲಿ ಆಮ್ಲಜನಕದ ಬೆಂಬಲ ಅಗತ್ಯವಿರುವ ಸೌಮ್ಯ ಮತ್ತು ಮಧ್ಯಮ ಗುಣಲಕ್ಷಣದ ಕೋವಿಡ್ ರೋಗಿಗಳಿಗೆ ಈ ಕೇಂದ್ರದಲ್ಲಿ ಸೇವೆ ಸಿಗಲಿದೆ.
ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಮತ್ತು ಸ್ನಾನಗೃಹಗಳನ್ನು ಹೊಂದಿರುವ ಪ್ರತ್ಯೇಕ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಒಟ್ಟು 35ರಿಂದ 50 ಹಾಸಿಗೆಗಳ ಸಾಮರ್ಥ್ಯವಿರುವ 22 ವಾರ್ಡ್‌ಗಳಿವೆ. ಈ ವಾರ್ಡ್‌ಗಳಿಗೆ ಮಹಾತ್ಮ ಗಾಂಧಿ, ಅಬ್ದುಲ್ ಕಲಾಂ, ಸುಭಾಷ್ ಚಂದ್ರ ಬೋಸ್, ಮಂಗಲ್ ಪಾಂಡೆ, ರಾಜಾ ಭೋಜ್ ಮತ್ತು ಸರ್ದಾರ್ ಪಟೇಲ್ ಮುಂತಾದ ಶ್ರೇಷ್ಠ ವ್ಯಕ್ತಿಗಳ ಹೆಸರನ್ನು ಇಡಲಾಗಿದೆ. ರೋಗಿಗಳಿಗೆ ಕೇಂದ್ರದಲ್ಲಿ ಔಷಧಿ, ತಿಂಡಿ ಮತ್ತು ಎರಡು ಬಾರಿ ಊಟವನ್ನು ನೀಡಲಾಗುತ್ತದೆ.
ಕ್ವಾರಂಟೈನ್ ಕೇಂದ್ರವು ಎರಡೂ ಬದಿಯಲ್ಲಿ ಧನ್ವಂತರಿ ಯೋಗ ಕೊಠಡಿಗಳಿರುತ್ತವೆ. ಬೆಳಿಗ್ಗೆ ಮತ್ತು ಸಂಜೆ ಯೋಗ ತರಗತಿಗಳು ನಡೆಯಲಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ. ರೋಗಿಗಳನ್ನು ರಂಜಿಸಲು ಎರಡು ಎಲ್ಇಡಿ ಪರದೆಗಳು ಮತ್ತು ಧ್ವನಿ ವ್ಯವಸ್ಥೆ ಮಾಡಲಾಗಿದ್ದು ರಾಮಾಯಣ ಮತ್ತು ಮಹಾಭಾರತದಂತಹ ಧಾರಾವಾಹಿಗಳನ್ನು ಹಾಗೂ ದೇಶಭಕ್ತಿಯ ಚಲನಚಿತ್ರಗಳನ್ನು ಪ್ರಸಾರ ಮಾಡಲಾಗುತ್ತದೆ. ಗಾಯತ್ರಿ ಮತ್ತು ಮಹಾಮೃತ್ಯುಂಜಯ ಮಂತ್ರದ ಪಠಣ ಕೂಡಾ ನಡೆಯಲಿದೆ.
ಈ ಕೇಂದ್ರವನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಉದ್ಘಾಟಿಸಿ ಸಾರ್ವಜನಿಕರಿಗೆ ಅರ್ಪಿಸಿದರು. “ಮಾಧವ್ ಸೇವಾ ಕೇಂದ್ರವು ಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ರೋಗಿಗಳಿಗೆ ಸೇವೆ ಸಲ್ಲಿಸಲಿದೆ ಎಂದರು. ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಬಿಜೆಪಿ ಮಧ್ಯಪ್ರದೇಶ ಮುಖ್ಯಸ್ಥ ವಿಷ್ಣು ದತ್ ಶರ್ಮಾ ಅವರು ಉಪಸ್ಥಿತರಿದ್ದರು.